ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರಿಗೆ ಬಂಪರ್ ಕೊಡುಗೆ ನೀಡಲು ತಯಾರಿ ನಡೆಸಿದೆ. ಒಂದು ತಿಂಗಳೊಳಗೆ ತಿಂಗಳಲ್ಲಿ ‘ಆಶ್ರಯ ಸಮಿತಿ’ ಸಹಿತ ವಿವಿಧ ಹುದ್ದೆಗಳ ಭಾಗ್ಯ ಕರುಣಿಸಲು ಪಕ್ಷ ತ್ವರಿತ ಕ್ರಮ ಕೈಗೊಳ್ಳುತ್ತಿದೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ಒದಗಿಸಿದ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬುಧವಾರ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ನಮ್ಮ ಪಕ್ಷ ಶಾಸಕರು ಹಾಗೂ ಸಚಿವರಿಗೆ ಕೆಲವು ಸೂಚನೆ ನೀಡಿದ್ದೇವೆ. ಈ ತಿಂಗಳ ಒಳಗಾಗಿ ಆಶ್ರಯ ಸಮಿತಿ, ಆರಾಧನಾ ಸಮಿತಿ, ಇಂಧನ ಇಲಾಖೆ ಉಪಸಮಿತಿ, ನೀರಾವರಿ ಇಲಾಖೆ ಕೆರೆಗಳ ಸಮಿತಿ, ಕೆಡಿಪಿ ಸೇರಿದಂತೆ ಎಲ್ಲ ಸಮಿತಿಗಳಿಗೆ ನಾಮನಿರ್ದೇಶನ ಮಾಡಬೇಕು. ಜಿಲ್ಲಾಧ್ಯಕ್ಷರು ಹಾಗೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ತಿಂಗಳ ಒಳಗಾಗಿ ಜಿಲ್ಲಾ ಮಂತ್ರಿಗಳು ನಾಮನಿರ್ದೇಶನ ಮಾಡಿ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದರು.
ಸಂಸತ್ ಚುನಾವಣೆ ದೃಷ್ಟಿಯಿಂದ ಪ್ರತಿ ಜಿಲ್ಲೆಗೂ ಓರ್ವ ಸಚಿವರಿಗೆ ಜವಾಬ್ದಾರಿ ನೀಡಿದ್ದೇವೆ. ಅವರ ಕೈಕೆಳಗೆ ಉಪಾಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ನಿಯೋಜಿಸಿದ್ದೇವೆ. ಬ್ಲಾಕ್ ಮಟ್ಟದಲ್ಲಿ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ, ಬಿಎಲ್ಎಗಳ ನೇಮಕ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷದ ಸಂಘಟನೆಗಳು, ಬ್ಲಾಕ್ ಮಟ್ಟದಲ್ಲಿ ಬದಲಾವಣೆ ಮಾಡಿ ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದೇವೆ ಎಂದರು.
ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾಡಲು ತೀರ್ಮಾನಿಲಾಗಿದೆ. ಫೆ.12 ರಂದು ವಿಧಾನಮಂಡಲದ ಅಧಿವೇಶನ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ತಿಂಗಳ 12ರ ಒಳಗಾಗಿ ಈ ಸಮಾವೇಶಗಳನ್ನು ನಡೆಸಬೇಕಿದೆ. ಜಿಲ್ಲಾ ಮಂತ್ರಿಗಳು ಈ ಸಮಾವೇಶಗಳ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದವರು ತಿಳಿಸಿದರು.
‘ಮನೆ, ಮನೆಗೆ ಕಾಂಗ್ರೆಸ್’ ಎಂಬ ಕಾರ್ಯಕ್ರಮವನ್ನು ರೂಪಿಸುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ. ಇನ್ನು ಕಾರ್ಯಕರ್ತರಿಗೆ ಶಕ್ತಿ ತುಂಬಲು ನಿಗಮ ಮಂಡಳಿಗಳ ನೇಮಕದ ಮೊದಲ ಪಟ್ಟಿ ಸದ್ಯದಲ್ಲೇ ಪ್ರಕಟವಾಗಲಿದೆ. ಈ ಹುದ್ದೆಗಳ ಕಾಲವಧಿ 2 ವರ್ಷ. ಎಲ್ಲರಿಗೂ ಅವಕಾಶ ಸಿಗಲಿ ಎಂದು ಈ ಕಾಲಮಿತಿ ಮಾಡಿದ್ದೇವೆ. ಎಂದು ಡಿಕೆಶಿ ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ಬಗ್ಗೆ ಎಐಸಿಸಿ ನಾಯಕರು ನಮಗೆ ಅಜೆಂಡಾ ನಿಗದಿ ಮಾಡಿದ್ದಾರೆ. 28 ಕ್ಷೇತ್ರಗಳಿಗೆ ಮಂತ್ರಿಗಳನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದು, ನಾಳೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಾಲ್ಕು ರಾಜ್ಯಗಳ ಸಚಿವರುಗಳ ಸಭೆ ಕರೆಯಲಾಗಿದೆ. ಅಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಿಳಿಸುತ್ತಾರೆ ಎಂದವರು ಮಾಹಿತಿ ನೀಡಿದರು.


























































