ಬೆಂಗಳೂರು: ಬೆಂ.ಮ.ಸಾ.ಸಂಸ್ಥೆಯಲ್ಲಿ ಮೃತ ನೌಕರರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಭರವಸೆ ನೀಡಿದ್ದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಇದೀಗ ಆಶ್ವಾಸನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಳಗ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸಚಿವ ರಾಮಲಿಂಗಾ ರೆಡ್ಡಿ ಅವರು ಅನುಕಂಪದ ಆಧಾರದಡಿಯಲ್ಲಿ ಮೃತರ ಅವಲಂಬಿತರಿಗೆ ನೇಮಕಾತಿ ಆದೇಶಪತ್ರ ನೀಡಿ ಶುಭ ಹಾರೈಸಿದರು.
ಪ್ರಸ್ತುತ ಖಾಲಿ ಇರುವ ಕ.ರಾ.ಸಾ. ಪೇದೆ, ತಾಂತ್ರಿಕ ಸಹಾಯಕ ಮತ್ತು ಸಹಾಯಕ (ಕಛೇರಿ) ಒಟ್ಟು 48 ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ಇಂದು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೆಂ.ಮ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್.ಆರ್,, ಮಾಹಿತಿ ತಂತ್ರಜ್ಞಾನದ ನಿರ್ದೇಶಕರಾದ ಶಿಲ್ಪ.ಎಂ, ಹಾಗೂ ಎಲ್ಲಾ ಇಲಾಖಾ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.