ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ಯಮಿಗೆ ವಂಚಿಸಿರುವ ಆರೋಪದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಈ ಪ್ರಕರಣ ಕುರಿತಂತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಉದ್ಯಮಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಪಡೆದು, ವಂಚನೆ ಮಾಡಿರುವ ಆರೋಪದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಇದೀಗ ಸಿಸಿಬಿ ವಶದಲ್ಲಿದ್ದಾರೆ. ಕಳೆದ ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಅವರನ್ನಿಂದು ತನಿಖಾ ತಂಡ ವಿಚಾರಣೆಗಾಗಿ ಕರೆದೊಯ್ದಿದೆ. ಸಿಸಿಬಿ ಕಚೇರಿಗೆ ಕರೆತಂದ ವೇಳೆ ವಾಹನದಿಂದ ಇಳಿಯುತ್ತಿದ್ದಂತೆಯೇ ಮಾಧ್ಯಮಗಳತ್ತ ನೋಡಿ ತಮ್ಮದೇ ದಾಟಿಯಲ್ಲಿ ಹೇಳಿಕೆ ನೀಡುತ್ತಾ ಕಟ್ಟಡ ಪ್ರವೇಶಿಸಿದ್ದಾರೆ. ‘ಸ್ವಾಮೀಜಿ ಬಂಧನವಾಗಲಿ ಆಗ ಎಲ್ಲ ಸತ್ಯ ಹೊರಗಡೆ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ’ ಎಂದು ಹೇಳುತ್ತಾ ಸಿಸಿಬಿ ಕಚೇರಿ ಒಳಗಡೆ ತೆರಳಿದ್ದಾರೆ.
ಈ ಪ್ರಕರಣದಲ್ಲಿ ಹೊಸಪೇಟೆ ಜಿಲ್ಲೆಯ ಹಿರೇ ಹಡಗಲಿಯ ಹಾಲುಸ್ವಾಮಿ ಮಠದ ಅಭಿನವ ಶ್ರೀ ಹಾಲುಶ್ರೀ ಹೆಸರೂ ಥಳುಕುಹಾಕಿಕೊಂಡಿದೆ. ಅವರ ಬಂಧನಕ್ಕೂ ಸಿಸಿಬಿ ಪೊಲೀಸರು ಬಲೇ ಬೀಸಿದ್ದಾರೆ. ಚೈತ್ರಾ ಹೇಳಿಕೆ ನಂತರ ಎಲ್ಲರ ಚಿತ್ತ ಸ್ವಾಮೀಜಿಯತ್ತ ನೆಟ್ಟಿದೆ.