ಬೆಂಗಳೂರು: ಬಿಜೆಪಿ ಬೆಳವಣಿಗೆ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಒಂದಷ್ಟು ಖುಷಿ, ಒಂದಷ್ಟು ಬೇಸರ. ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಿರುವ ಪ್ರಜ್ರಿಯೆ ಹಾಗೂ ಉದ್ದೇಶಗಳ ಕುರಿತಂತೆ ಸಂಘದ ಹಾಗೂ ಬಿಜೆಪಿ ಕಾರ್ಯಕರ್ತರ ಪ್ರತಿಕ್ರಿಯೆಯು ಅಚ್ಚರಿ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬೊಮ್ಮಾಯಿ ಅವರು ಸಿಎಂ ಆಗುತ್ತಿರುವುದು ಸಂತಸದ ವಿಷಯ. ಆದರೆ ಮೂಲ ಬಿಜೆಪಿ ನಾಯಕರನ್ನು ಹೈಕಮಾಂಡ್ ಮೂಲೆಗುಂಪು ಮಾಡಿತೇ ಎಂಬುದು ಕಾರ್ಯಕರ್ತರ ಆತಂಕ.
ಬೊಮ್ಮಾಯಿ ವ್ಯಕ್ತಿತ್ವ ಹಾಗೂ ಕಾರ್ಯಶೈಲಿ ಬಗ್ಗೆ ಎರಡು ಮಾತಿಲ್ಲ. ಅವರು ಸಿಎಂ ಸ್ಥಾನಕ್ಕೆ ಸೂಕ್ತ ವ್ಯಕ್ತಿ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅವರ ಆಯ್ಕೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂಬುದು ಹಲವರ ಅಭಿಪ್ರಾಯ.
ಸಂಘದ ಶಿಕ್ಷಣ ಪಡೆಯಲಿ..
ಬಿಜೆಪಿ ಸೇರಿದಂತೆ ಸಂಘದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಆಲಂಕರಿಸುವವರು ಸಂಘದ ಶಿಕ್ಷಿತ ಸ್ವಯಂಸೇವಕರಾಗಿರುತ್ತಾರೆ ಎಂಬುದು ಸಾಮಾನ್ಯ. ಆದರೆ ಬಸವರಾಜ್ ಬೊಮ್ಮಾಯಿ ಅವರು ಸಂಘದ ಶಿಕ್ಷಣ ಪಡೆದಿಲ್ಲ ಎಂಬುದು ಹಲವರ ಪ್ರತಿಪಾದನೆ. ಸಂಘದ ಬಗ್ಗೆ ಅವರಿಗೆ ಅಷ್ಟೇನೂ ಒಲವು ಕೂಡಾ ಇಲ್ಲ ಎಂಬ ಬೇಸರ ಹಲವರದ್ದು.
ಜನತಾ ಪರಿವಾರ ನೆಲೆ ಕಳೆದುಕೊಂಡ ಹಿನ್ನೆಲೆಯಲ್ಲಿ ಅವರು ಬಿಜೆಪಿಗೆ ಬಂದರೇ ಹೊರತು ತತ್ವ ಸಿದ್ದಂತದ ಆಕರ್ಷಣೆಯಿಂದಲ್ಲ. ಬಿಜೆಪಿ ಸೇರ್ಪಡೆಯಾದ ನಂತರವೂ ಯಡಿಯೂರಪ್ಪ ಸಾಂಗತ್ಯಕ್ಕೆ ಅವರ ಒಲವಿತ್ತೇ ಹೊರತು ಸಂಘದ ಬಗ್ಗೆ ತಿಳಿಯುವ ಪ್ರಯತ್ನ ಮಾಡಿಲ್ಲ. ಈಗಲಾದರೂ ಆರೆಸ್ಸೆಸ್ ಅಂದರೆ ಏನೆಂಬುದನ್ನು ಅವರು ತಿಳಿಯಲಿ ಎಂದು ಕಾರ್ಯಕರ್ತರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆರೆಸ್ಸೆಸ್ ಕಚೇರಿಗೆ, ಸಂಘಸ್ಥಾನಕ್ಕೆ ಭೇಟಿ ನೀಡುವ, ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರ ಕುಶಲೋಪರಿ ವಿಚಾರಿಸುವ ಪ್ರಯತ್ನದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಹಿಂದೇಟು ಹಾಕುತ್ತಿದ್ದರು. ಇನ್ನಾದರೂ ಅವರು ಕಾರ್ಯಾಲಯಕ್ಕೆ ಹೆಚ್ಚು ಬಾರಿ ಭೇಟಿ ನೀಡಿ ಅಪ್ಪಟ ಬಿಜೆಪಿ ನಾಯಕನೆನಿಸಲಿ ಎಂಬ ಅಪೇಕ್ಷೆ ಕೇಸರಿ ಕಾರ್ಯಕರ್ತರದ್ದು.
ಸಾಂಗತ್ಯಕ್ಕೆ ಅಂಟಿಕೊಳ್ಳದಿರಿ..
ಲಿಂಗಾಯತ ಸಮುದಾಯ, ಹಾಗೂ ಬಿಎಸ್‌ವೈ ಸಾಂಗತ್ಯದ ಕಾರಣಕ್ಕಾಗಿ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆಯೇ ಹೊರತು ಬಿಜೆಪಿಯ ಸೇನಾನಿಯಾಗಿ ಅಲ್ಲ ಎಂಬುದು ಹಲವರ ಮಾತು. . ‘ಇನ್ನು ಮುಂದಾದರೂ ಅವರು ಪರಿಪೂರ್ಣ ಬಿಜೆಪಿ ನಾಯಕರಾಗಿ ಗುರುತಿಸಿಕೊಳ್ಳಬೇಕಿದೆ’ ಎಂದು ಹಲವರು ಸಲಹೆಗಳನ್ನು ಮುಂದಿಟ್ಟಿದ್ದಾರೆ. ಕಾರ್ಯಕರ್ತರ ಈ ಮಾತಿನಲ್ಲಿ ಬೇಸರ ಕಾಣುತ್ತಿತ್ತು.
ಬಿಎಸ್‌ವೈ ಅವರನ್ನು ಬದಲಿಸಿದ್ದೇ ಭ್ರಷ್ಟಾಚಾರ ಆರೋಪದ ಕಾರಣಕ್ಕಾಗಿ. ಇದೀಗ ಯಡಿಯೂರಪ್ಪ ಅವರು ಸೂಪರ್ ಸಿಎಂ ಆಗಲು ಪ್ರಯತ್ನ ನಡೆಸಿದ್ದೇ ಆದಲ್ಲಿ, ಬಸವರಾಜ್ ಬೊಮ್ಮಾಯಿ ಅವರು ಯೋಚಿಸಿ ಮುನ್ನಡೆಯಬೇಕಿದೆ ಎಂಬುದೂ ಬಿಜೆಪಿ ಮುಖಂಡರ ಅಭಿಪ್ರಾಯ. ಸಿಎಂ ಆದ ನಂತರ ಬೊಮ್ಮಾಯಿ ಅವರು ಪಕ್ಷದ ಅಣತಿಯಂತೆ ಮುನ್ನಡೆಯಬೇಕೇ ಹೊರತು, ಸಿಎಂ ಆಗಲು ಕಾರಣರಾದ ಕುಟುಂಬಕ್ಕೆ ಆಶ್ರಯದಾತರಾಗಿ ಇರಬಾರದು ಎಂಬ ಸಲಹೆಯನ್ನೂ ಹಲವರು ಮುಂದಿಟ್ಟಿದ್ದಾರೆ.