ಬೆಂಗಳೂರು: ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ವಿಧಿವಶರಾಗಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅವರು ಹೃದಯಾಘಾತಕ್ಕೊಳಗಾಗಿದ್ದು ಬೆಂಗಳೂರಿನ ಆಸ್ಪತ್ರೆಯಲ್ಲಿ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಬಹು ಅಂಗಾಂಗ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು ಮೂರು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಚಿಕಿತ್ಸೆಯ ನಡುವೆ ಕಳೆದ ತಡರಾತ್ರಿ ಹೃದಯಾಘಾತವಾಗಿದೆ ಎನ್ನಲಾಗಿದೆ. ತಡರಾತ್ರಿ 1.20ಕ್ಕೆ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಪ್ರಭಾವಿ ದಲಿತ ಮುಖಂಡರಾಗಿರುವ ಶ್ರೀನಿವಾಸ್ ಪ್ರಸಾದ್, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಅನಾರೋಗ್ಯದ ಕಾರಣದಿಂದಾಗಿ ಕಳೆದ ಕೆಲ ಸಮಯದಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರು.