ಮೇಲ್ಮನೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು BJP-JDS ಪಕ್ಷಗಳು ಮೈತ್ರಿ ಮುಂದುವರಿಸಿದೆ. ವಿಧಾನಪರಿಷತ್‌ನ ಆರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಒಂದು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಬಿಜೆಪಿ ಇನ್ನುಳಿದ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.
ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ. ವಿಧಾನಪರಿಷತ್ತಿನ 6 ಕ್ಷೇತ್ರಗಳ ಪೈಕಿ ನೈರುತ್ಯ ಪದವೀಧರ ಕ್ಷೇತ್ರನ್ನು ಜೆಡಿಎಸ್‌ನ ಭೋಜೇಗೌಡ ಪ್ರತಿನಿಧಿಸುತ್ತಿದ್ದಾರೆ. ಹಾಗಾಗಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಟ್ಟಿದೆ.
ಹಲವು ದಶಕಗಳಿಂದ ನೈಋತ್ಯ ಪದವೀಧರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರಗಳನ್ನು ಬಿಜೆಪಿ ಪ್ರತಿನಿಧಿಸುತ್ತಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಒಂದು ವೇಳೆ, ಲೋಕಸಭಾ ಚುನಾವಣೋತ್ತರದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಕಡಿದುಕೊಂಡರೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸಿತ್ತು. ಆದರೆ ಜೆಡಿಎಸ್-ಬಿಜೆಪಿ ನಾಯಕರ ಸಮರತಂತ್ರದ ಫಲವಾಗಿ ಮೇಲ್ಮನೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ. ಹಾಗಾಗಿ ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಮರಳಿ ಪಡೆಯುವ ಕಮಲ ಪಕ್ಷದ ಪ್ರಯತ್ನ ಸಫಲವಾಗಿಲ್ಲ.
ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆ ಅನಿವಾರ್ಯವಾಗಿದೆ. ಹಾಗಾಗಿ ಒಂದು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದ್ದು, ಇನ್ನುಳಿದ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ಪಕ್ಷ ಬೆಂಬಲಿಸಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.