ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಖಾಡ ಸಜ್ಜಾಗಿದ್ದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆದ್ಮಿ ಪಕ್ಷಗಳ ಪ್ರಚಾರ ತಾರಕಕ್ಕೇರಿದೆ. ಎಸ್‌ಡಿಪಿಐ ಕೂಡಾ ಕಮಾಲ್ ಪ್ರದರ್ಶಿಸಲು ತಯಾರಿ ನಡೆಸಿದೆ. ಇದೆ ವೇಳೆ ಕುಟುಂಬ ರಾಜಕಾರಣದ ಮಾತುಗಳು ಅಖಾಡದಲ್ಲಿ ಪ್ರತಿಧ್ವನಿಸುತ್ತಿವೆ.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗುತ್ತಿದೆ ಎಂಬುದು ಬಿಜೆಪಿಯ ಟೀಕೆ. ಈ ಬಾರಿಯ ಚುನಾವಣೆಯಲ್ಲೂ ಇದೇ ಟೀಕಾಸ್ತ್ರ ಪ್ರಯೋಗದ ಮೂಲಕ ಎದುರಾಳಿ ಪಕ್ಷಗಳನ್ನು ಕಟ್ಟಿಹಾಕಲು ಬಿಜೆಪಿ ವರಿಷ್ಠರು ರಣತಂತ್ರ ರೂಪಿಸಿದ್ದಾರೆ. ಹಾಗಾಗಿ ಕರ್ನಾಟಕ ಬಿಜೆಪಿಯನ್ನು ‘ಫ್ಯಾಮಿಲಿ ಪಾಲಿಟಿಕ್ಸ್’ನಿಂದ ದೂರವಿಡುವ ಕಸರತ್ತು ಬಿಜೆಪಿ ಹೈಕಮಾಂಡ್‌ನಿಂದ ನಡೆದಿದೆ.
ಈಶ್ವರಪ್ಪ, ಶೆಟ್ಟರ್, ಜಾರಕಿಹೊಳಿ ಕುಟುಂಬಕ್ಕೆ ವರಿಷ್ಠರು ರವಾನಿಸಿರುವ ತಮ್ಮದೇ ಆದ ಸಂದೇಶ ಹಾಗೂ ಈಶ್ವರಪ್ಪ ಅವರು ಚುನಾವಣಾ ರಾಜಕಾರಣದಿಂದ ದೂರ ಉಳಿದಿರುವ ಬೆಳವಣಿಗೆ ಕಮಲ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಆದರೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗಮನಿಸಿದರೆ ಬಿಜೆಪಿಯು ಕುಟುಂಬ ರಾಜಕಾರಣದಿಂದ ಹೊರ ಬರುವಲ್ಲಿ ವಿಫಲವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಸಂಸದರು, ಶಾಸಕರು ಒಂದೇ ಕುಟುಂಬ..?
ಕುಟುಂಬ ರಾಜಕಾರಣದ ಕಳಂಕ ಇರಬಾರದೆಂಬ ಕಾರಣಕ್ಕಾಗಿ ಬಿಜೆಪಿ ಈ ಬಾರಿ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದರೆ ಬಹುತೇಕ ನಾಯಕರ ಕುಟುಂಬಗಳು ಒಟ್ಟಾಗಿಯೇ ಅಖಾಡಕ್ಕಿಳಿದಿವೆ. ಇನ್ನೂ ಕೆಲವೆಡೆ ಸಂಸದ, ಶಾಸಕ ಸ್ಥಾನಗಳನ್ನು ಹಂಚಿಕೊಳ್ಳುವಂತಾಗಿದೆ. ಈ ಅವಕಾಶ ಇನ್ನೂ ಮುಂದುವರಿದಿದೆ ಎಂಬುದೇ ಬಿಜೆಪಿ ಕಾರ್ಯಕರ್ತರಿಗಿರುವ ಬೇಸರ.
ಒಂದೇ ಕುಟುಂಬ..?
-
ಸಂಸದ ರಾಘವೇಂದ್ರರ ಸಹೋದರ ವಿಜಯೇಂದ್ರಗೆ ಟಿಕೆಟ್
-
ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಪತ್ನಿ ಶಶಿಕಲಾ ಜೊಲ್ಲೆಗೂ ಟಿಕೆಟ್
-
ಸಂಸದ ತೇಜಸ್ವಿ ಸೂರ್ಯ ಅವರ ಮಾವ ರವಿಸುಬ್ರಹ್ಮಣ್ಯ ಬಸವನಗುಡಿಯಲ್ಲಿ ಸ್ಪರ್ಧಿ
-
ಸಂಸದ ಬಸವರಾಜ್ ಪುತ್ರ ಜ್ಯೋತಿ ಗಣೇಶ್ ತುಮಕೂರಿನಲ್ಲಿ ಅಖಾಡಕ್ಕೆ
-
ಕತ್ತಿ ಕುಟುಂಬದಲ್ಲೂ ಇಬ್ವರ ಸ್ಪರ್ಧೆ
-
ಜಾರಕಿಹೊಳಿ ಫ್ಯಾಮಿಲಿಗೂ ಹೆಚ್ಚು ಟಿಕೆಟ್
ಅರವಿಂದ ಲಿಂಬಾವಳಿ ಸಂಬಂಧಿ ರಘು ಅವರಿಗೂ ಟಿಕೆಟ್
ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಸಹೋದರ ಮುರುಗೇಶ್ ನಿರಾಣಿ ಮತ್ತೆ ಕಣಕ್ಕೆ
ಕರುಣಾಕರ ರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಸಹೋದರರಿಗೆ ಮತ್ತೊಮ್ಮೆ ಟಿಕೆಟ್
-
ಇನ್ನೂ ಹಲವೆಡೆ ನಾಯಕರ ಪುತ್ರರಿಗೇ ಉತ್ತರಾಧಿಕಾರ..!
RSS ನಾಯಕರಲ್ಲೂ ಅಸಮಾಧಾನ:
ಬಿಜೆಪಿ ಪಕ್ಷವು ರಾಷ್ಟ್ರೀಯವಾದದ ಚಿಂತನೆಯುಳ್ಳ ಆರೆಸ್ಸೆಸ್‌ನ ವಿವಿಧ ಕ್ಷೇತ್ರಗಳಲ್ಲಿ ಒಂದೆನಿಸಿದೆ. ಹೀಗಿರುವಾಗ ಅಧಿಕಾರ ಅಥವಾ ಜವಾಬ್ಧಾರಿಯು ನಿರ್ದಿಷ್ಟ ಕುಟುಂಬದತ್ತ ಕೇಂದ್ರೀಕೃತವಾಗಿರುವುದು ಸರಿಯಲ್ಲ ಎಂದು ಸಂಘದ ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ , ಈ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ವರಿಷ್ಠರು ಕ್ರಮಕೈಗೊಳ್ಳಬೇಕಿದೆ ಎಂಬುದು ಅವರ ಸಲಹೆ.