ಕಲಬುರಗಿ: ಶಕ್ತಿ ಯೋಜನೆ ಪರಿಣಾಮ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸಾರಿಗೆ ಬಸ್ ಒದಗಿಸುವ ದೃಷ್ಠಿಯಿಂದ ಬರುವ ಮಾರ್ಚ್ ಅಂತ್ಯಕ್ಕೆ ರಾಜ್ಯದ ನಾಲ್ಕು ನಿಗಮಗಳಿಗೆ 5,800 ಬಸ್ ಖರೀದಿಸಲಾಗುತ್ತಿದೆ. ರಾಜ್ಯದ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಗುರುವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ KKRDBಯ 20 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ ಕೋಟೆ ಮಾದರಿ ನಗರ ಸಾರಿಗೆ ಬಸ್ ನಿಲ್ದಾಣವನ್ನು ಸಚಿವರು ಲೋಕಾರ್ಪಣೆಗೊಳಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಬುರಗಿ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ಹೊರವಲಯದ ನಾಲ್ಕು ದಿಕ್ಕಿನಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರ ಪ್ರಸ್ತಾವನೆಗೆ ಸಮಾರಂಭದಲ್ಲಿ ಮಾತನಾಡಿ, ನಿವೇಶನ ನೀಡಿದಲ್ಲಿ ಸ್ಯಾಟ್ಲೈಟ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಶಕ್ತಿ ಯೋಜನೆ ಜಾರಿ ಮುನ್ನ ರಾಜ್ಯದಲ್ಲಿ ಪ್ರತಿ ದಿನ 84 ಲಕ್ಷ ಜನ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿ ನಂತರ 1.10 ಕೋಟಿ ಜನ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆ ಕುರಿತು ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದರು. ಈಗ ಯೋಜನೆ ಜಾರಿಯಾಗಿದೆ. ಕಳೆದ 8 ತಿಂಗಳ ಅವಧಿಯಲ್ಲಿ 139 ಕೋಟಿ ಜನ ಸಂಚಾರ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ ಇದಾಗಿದೆ ಎಂದು ರಾಮಲಿಂಗ ರೆಡ್ಡಿ ಬಣ್ಣಿಸಿದರು.
KKRTC ಸಂಸ್ಥೆಗೆ ಈಗಾಗಲೆ 630 ಬಸ್ ನೀಡಲಾಗಿದೆ. ಮುಂದಿನ ದಿನದಲ್ಲಿ ಮತ್ತೆ 485 ಬಸ್ ನೀಡಲಾಗುವುದು. ರಾಜ್ಯದಲ್ಲಿ 2016ರ ನಂತರ 13,888 ಜನ ನಿವೃತ್ತಿಯಾಗಿದ್ದು, ಹಿಂದಿನ ಸರ್ಕಾರದಲ್ಲಿ ನೇಮಕಾತಿ ನಡೆದಿರಲಿಲ್ಲ. ನಮ್ಮ ಸರ್ಕಾರ ಬಂದ ಕೂಡಲೆ ನೇಮಕಾತಿಗೆ ಚಾಲನೆ ನೀಡಿದ್ದೇವೆ. 9 ಸಾವಿರ ಸಿಬ್ಬಂದಿ ನೇಮಕಕ್ಕೆ ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಇದರಲ್ಲಿ KKRTC ಸಂಸ್ಥೆಯ 1,680 ನೇಮಕಾತಿ ಸೇರಿವೆ. 500 ಜನರಿಗೆ ಅನುಕಂಪ ಮೇಲೆ ಉದ್ಯೋಗ ನೀಡಲಾಗಿದೆ. KSRTC ಮತ್ತು KKRTC ಸಂಸ್ಥೆಯಲ್ಲಿನ ಸಾರಿಗೆ ನೌಕರರು ಅಪಘಾತದಲ್ಲಿ ಮರಣ ಹೊಂದಿದಲ್ಲಿ 1 ಕೋಟಿ ರೂ. ಜೀವ ವಿಮೆ ಒದಗಿಸುವ ಯೋಜನೆ ಜಾರಿಗೊಳಿಸಿದ್ದು, ಇದು ದೇಶದಲ್ಲಿಯೆ ಮಾದರಿಯಾಗಿದೆ. ಒಂದೆಡೆ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಬೇಕು. ಇನ್ನೊಂದೆಡೆ ಕಾರ್ಮಿಕರ ಹಿತವು ಕಾಯಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ ಎಂದರು.
ಇತ್ತೀಚೆಗೆ ನಡೆದ ಮಂಡಳಿ ಸಭೆಯಲ್ಲಿ ಈಶಾನ್ಯ ಭಾಗದ ಜಿಲ್ಲೆಗಳು ಬೆಂಗಳೂರಿಗೆ 600 ಕಿ.ಮೀ. ದೂರದಲ್ಲಿರುವ ಕಾರಣ ಮತ್ತು ಓಡಾಟ ಹೆಚ್ಚಿರುವುದರಿಂದ ವೋಲ್ವೋ, ಎ.ಸಿ. ಬಸ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸುವಂತೆ ಎಂ.ಡಿ. ಅವರಿಗೆ ಸೂಚನೆ ನೀಡಿದ್ದೇನೆ. ಪರಿಣಾಮ ಇಂದಿಲ್ಲಿ ನಾಲ್ಕು ಎ.ಸಿ. ಮತ್ತು ನಾಲ್ಕು ನಾನ್ ಎ.ಸಿ. ಸ್ಲೀಪರ್ ಬಸ್ಗಳಿಗೆ ಚಾಲನೆ ನೀಡಿದ್ದೇವೆ ಎಂದು ಸಾರಿಗೆ ಸಚಿವರು ತಿಳಿಸಿದರು.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಮಾನ್ಯ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ ಹಿಂದೆ ತಾವು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರಾಗಿದ್ದಾಗ 5 ಕೋಟಿ ರೂ. ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡಿದೆ. ಮುಂದೆ ಮಂಡಳಿಯಿಂದ ಉಳಿದ 15 ಕೋಟಿ ರೂ. ನೀಡಿ ಸುಸಜ್ಜಿತ ಬಸ್ ನಿಲ್ದಾಣ ಪೂರ್ಣಗೊಳಿಸಲಾಗಿದೆ. *ಸೂಪರ್ ಮಾರ್ಕೆಟ್ ಬಸ್ ನಿಲ್ದಾಣ ನಿರ್ಮಾಣ* ದಿಂದ ವಿವಿಧ ಗ್ರಾಮೀಣ ಭಾಗದಿಂದ ನಗರಕ್ಕೆ ಓಡಾಡುವ ಹಳ್ಳಿ ಜನರಿಗೆ ತುಂಬಾ ಅನುಕೂಲವಾಗಿದೆ ಎಂದರು.
KKRDB ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, ಮಂಡಳಿಯಿಂದಲೇ 20 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಈ ಪೈಕಿ 5 ಕೋಟಿಗಳನ್ನು ಮಂಡಳಿಯಿಂದ, 9 ಕೋಟಿಗಳನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ ಹಾಗೂ 5 ಕೋಟಿಗಳನ್ನು ಬಂಡವಾಳ ಅನುದಾನವನ್ನು ಬಳಸಲಾಗಿದೆ. ಕೆ.ಕೆ.ಆರ್.ಟಿ.ಸಿ ಸಂಸ್ಥೆಗೆ 120 ಬಸ್ ಖರೀದಿಗೆ ಮಂಡಳಿಯಿಂದ 50 ಕೋಟಿ ರೂ. ನೀಡಲಾಗುವುದು. ಇತ್ತೀಚೆಗೆ ಮಂಡಳಿಯಲ್ಲಿ ಒಂದು ನಿರ್ಣಯ ತೆಗೆದುಕೊಂಡಿದ್ದು ಶೇ.1/3 ಭಾಗ ಮಂಡಳಿ ಅನುದಾನ ನೀಡಿದರೆ, ಉಳಿದ 2/3 ಭಾಗ ಸಂಬಂಧಪಟ್ಟ ಇಲಾಖೆ ನೀಡಬೇಕು. ಹೀಗಾಗಿ ಬಸ್ ಖರೀದಿಗೆ ಉಳಿದ ಹಣ ಸರ್ಕಾರ ನೀಡಬೇಕೆಂದು ಮಾನ್ಯ ಸಚಿವರಾದ ರಾಮಲಿಂಗಾರೆಡ್ಡಿಗೆ ಅವರಿಗೆ ಕೋರಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಶಾಸಕರಾದ ಅಲ್ಲಮಪ್ರಭು ಪಾಟೀಲ ಮಾತನಾಡಿ, ಕಲಬುರಗಿ ಮಹಾನಗರ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿನಿತ್ಯ 1,200 ಬಸ್ ನಿರಂತರ ಕಾರ್ಯಾಚರಣೆ ಮಾಡುತ್ತಿವೆ. ಪರಿಣಾಮ ನಗರದಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಪರಿಸರ ಮಾಲಿನ್ಯ ಹೆಚ್ಚಿದೆ. ಇದನ್ನು ತಡೆಯಲು ಕಲಬುರಗಿ ನಗರದ ನಾಲ್ಕು ರಿಂಗ್ ರಸ್ತೆಯಲ್ಲಿ ಅಂದರೆ ಜೇವರ್ಗಿ ರಸ್ತೆ, ಹುಮನಾಬಾದ ರಸ್ತೆ, ಆಳಂದ ರಸ್ತೆ, ಸೇಡಂ ರಸ್ತೆಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು
ಮುಖ್ಯಮಂತ್ರಿ ಚಿನ್ನದ ಪದಕ ವಿತರಣೆ:
ಅಪಘಾತ ರಹಿತ ಚಾಲನೆ ಸೇವೆ ಸಲ್ಲಿಸಿದ 6 ಜನರಿಗೆ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ಕಲಬುರಗಿ ವಿಭಾಗ-1 ಹಾಗೂ 2ರ 121 ಚಾಲಕರಿಗೆ ಬೆಳ್ಳಿ ಪದಕಗಳನ್ನು ಇದೇ ಸಮಾರಂಭದಲ್ಲಿ ವಿತರಿಸಲಾಯಿತು.
ಅನುಕಂಪ ಆಧಾರದ ನೇಮಕಾತಿ:
ಎಜಾಜ್ ಅಹ್ಮದ್, ರೇವಣಸಿದ್ದಪ್ಪ ಅವರಿಗೆ ಅನುಕಂಪದ ನೇಮಕಾತಿ ಅದೇಶ ಪತ್ರ ನೀಡಲಾಯಿತು. ಈವರೆಗೂ ನಿಗಮದಿಂದ 61 ಅಭ್ಯರ್ಥಿಗಳನ್ನು ಅನುಕಂಪದ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ.
ವಿಮಾ ಪರಿಹಾರದ ಚೆಕ್ ವಿತರಣೆ:
ನಿಗಮದಲ್ಲಿ ಸೇವಾ ಅವಧಿಯಲ್ಲಿ ಮೃತಪಟ್ಟ 8 ಜನ ಅಧಿಕಾರಿ-ಸಿಬ್ಬಂದಿಗಳ ಅವಲಂಭಿತರಿಗೆ ತಲಾ 10 ಲಕ್ಷ ರೂ.ಗಳಂತೆ ಒಟ್ಟು 80 ಲಕ್ಷ ರೂ. ಗಳ ಆಂತರಿಕ ಗುಂಪು ವಿಮಾ ಪರಿಹಾರದ ಚೆಕ್ಗಳನ್ನು ಸಹ ವಿತರಣೆ ಮಾಡಲಾಯಿತು.
ಕಲ್ಯಾಣ ರಥಕ್ಕೆ ಚಾಲನೆ:
ಸಮಾರಂಭಕ್ಕೂ ಮುನ್ನ ಮಾನ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಕಲ್ಯಾಣ ರಥ (ಎ.ಸಿ. ಸ್ಲೀಪರ್) ಮತ್ತು ಅಮೋಘವರ್ಷ (ನಾನ್ ಎ.ಸಿ. ಸ್ಲೀಪರ್) ಬಸ್ಸುಗಳ ಲೋಕಾರ್ಪಣೆ ಮಾಡಿದರು.
ಎರಡು ಅಂತಸ್ತಿನ ಈ ಬಸ್ ನಿಲ್ದಾಣವನ್ನು ಪ್ರಸ್ತುತ ನೆಲ ಮಹಡಿ ಮಾತ್ರ ನಿರ್ಮಿಸಲಾಗಿದ್ದು, ಇದಕ್ಕಾಗಿ 20 ಕೋಟಿ ರೂ. ವೆಚ್ಚ ಮಾಡಲಾಗಿದೆ. ವಿಸ್ತೀರ್ಣ 4,455 ಚ.ಮೀ ಇದೆ. ಏಕಕಾಲದಲ್ಲಿ 12 ಬಸ್ ನಿಲುಗಡೆ ಮಾಡಬಹುದಾಗಿದೆ. ಒಟ್ಟಾರೆ 9 ಅಂಕಣಗಳಿವೆ. ಇದಲ್ಲದೆ ವಾಣಿಜ್ಯ ಸಂಕೀರ್ಣ, ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ, ಉದ್ಯಾನವನ ಒಳಗೊಂಡಿದೆ. ಬಸ್ ನಿಲ್ದಾಣದಿಂದ ಪ್ರತಿನಿತ್ಯ 450 ಬಸ್ ಟ್ರಿಪ್ ಮಾಡಬಹುದಾಗಿದೆ.
ಸಮಾರಂಭದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಮಾನ್ಯ ಸಚಿವರಾದ ಪ್ರಿಯಾಂಕ್ ಖರ್ಗೆ, ಮಾನ್ಯ ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ, ಶಾಸಕರಾದ ಎಂ.ವೈ.ಪಾಟೀಲ, ಕನೀಜ್ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಸಹಾಯಕ ಆಯುಕ್ತೆ ರೂಪಿಂದರ್ ಕೌರ್, ಕೆ.ಕೆ ಬಂದರಕಳ್ಳಿ, ಈಶ್ವರ ಹೊಸಮನಿ, ಗಂಗಾಧರ, ಡಿ.ಸಿ.ಸಿ. ಅಧ್ಯಕ್ಷ ಜಗದೇವ ಗುತ್ತೇದಾರ, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಹಾಗೂ ಅಧಿಕಾರಿಗಳು, ಸಾರಿಗೆ ಸಿಬ್ಬಂದಿ ಉಪಸ್ಥಿತರಿದ್ದರು.
























































