ಮಂಡ್ಯ: ಸಕ್ಕರೆ ಜಿಲ್ಲೆಯ ಪಾಲಿಗೆ ಅತ್ಯಂತ ಸವಿಯಾದ ನುಡಿಸುಗ್ಗಿಯ ಸಂಭ್ರಮ. ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ಶ್ರೀಮಂತಿಕೆ ತುಂಬಿರುವ ಮಂಡ್ಯದ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ವತಿಯಿಂದ ಭಾನುವಾರ ಮತ್ತೊಂದು ವಾರ್ಷಿಕ ನುಡಿ ಸುಗ್ಗಿಯ ಅನನ್ಯ ಸಮಾರಂಭ ನೆರವೇರಿತು. ಸರಸ್ವತ ಲೋಕದ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನೆರವೇರಿದ ಈ ಸಮಾರಂಭದಲ್ಲಿ 2022ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅನನ್ಯ, ಅಪೂರ್ವ ಸಮಾರಂಭ..
ಪ್ರತೀ ವರ್ಷ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ವತಿಯಿಂದ ಕಥಾಸಂಕಲನ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರುತ್ತಿದೆ. ಸಿಹಿಜಲ್ಲೆಯ ನಾಡಲ್ಲಿ ನಡೆಯುವ ಈ ಸಮಾರಂಭ ಈ ಬಾರಿ ಅತ್ಯಂತ ವೈಭವದಿಂದ ನೆರವೇರಿತು. ಸಾರಸ್ವತ ಲೋಕದ ಅಪ್ರತಿಮ ಸೇವೆ ಸಲ್ಲಿಸಿರುವ ಸಾಹಿತ್ಯ ದಿಗ್ಗಜ ದಿವಂಗತ ಬೆಸಗರಹಳ್ಳಿ ರಾಮಣ್ಣ ಅವರ ಸ್ಮರಣಾರ್ಥ ಈ ಸಮಾರಂಭ ಆಯೋಜಿಸಲಾಗಿತ್ತು. ಈ ಬಾರಿ ಕಥಾಸಂಕಲನ ಪ್ರಶಸ್ತಿ ಪ್ರದಾನದ ಜೊತೆಗೆ ‘ಹಿಂಗಿದ್ದ ನಮ್ಮ ರಾಮಣ್ಣ’ ಎಂಬ ವಿಶೇಷ ಕೃತಿಯನ್ನು ಬಿಡುಗಡೆ ಮಾಡಿದ ಸನ್ನಿವೇಶವೂ ಗಮನಸೆಳೆಯಿತು.
ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಕುರಿತ ಈ ಸಾಹಿತ್ಯ ಜಾತ್ರೆ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿರಿಯ ಐಪಿಎಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ, ಕಳೆದ 20 ವರ್ಷಗಳಿಂದ ಈ ಸಾರಸ್ವತ ಸಮಾರಂಭ ನಡೆಯುತ್ತಿದ್ದು, ಸಾಹಿತ್ಯ ಕ್ಷೇತ್ರದ ವಿವಿಧ ಮಜಲುಗಳಿಂದಲೂ ಪ್ರೋತ್ಸಾಹ ಸಿಕ್ಕಿದೆ ಎಂದು ಅಭಿನಂದಿಸಿದರು. ಬೇರುಗಳನ್ನು ಮರೆಯದೆ ಹೊಸದರಂತೆ ನಡೆಯುವ ಪ್ರಯತ್ನ ನಡೆಯಬೇಕಿದೆ. ಅದರಂತೆ ನಡೆದುಕೊಂಡು ಬರುತ್ತಿದ್ದೇವೆ ಎಂದರು.
ಗಣ್ಯರ ಅಭಿಮತವೂ ಸುಂದರ..!
‘ಉಪ್ಪುಚ್ಚಿ ಮುಳ್ಳು’ ಕೃತಿಯ ಕರ್ತೃ ದಯಾ ಗಂಗನಘಟ್ಟ ಅವರಿಗೆ 2022ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಯನ್ನು ಪ್ರದಾನ ಮಾಡಿದ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ. ಡಾ.ಬೆಸಗರಹಳ್ಳಿ ರಾಮಣ್ಣ ಅವರು ಎಲ್ಲ ಕಥೆಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಸಮಾಜದಲ್ಲಿನ ಆಗು-ಹೋಗುಗಳ ಬಗ್ಗೆ ತಿಳಿಸಿದ್ದಾರೆ. ಸಮಾಜದ ಅವರ ಕಥೆಗಳನ್ನು ಓದುತ್ತಿದ್ದರೆ ರಾಮಣ್ಣನವರು ವೈದ್ಯರಾ? ವೈದ್ಯರಿಂದ ಆಚೆಗೆ ಏನು ಎಂಬುದು ತಿಳಿಯುತ್ತದೆ ಎಂದರು.
ಹಿರಿಯ ಸಂಶೋಧಕ ಡಾ.ಸಿ.ವೀರಣ್ಣ ಮಾತನಾಡಿ, ಪ್ರಸ್ತುತ ಮನುಷ್ಯರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗಿಂತ ಸಮಾಜಕ್ಕೆ ಚಿಕಿತ್ಸೆ ನೀಡುವಂತಹ ವೈದ್ಯರ ಅಗತ್ಯತೆ ಹೆಚ್ಚಿದೆ ಎಂದರು. ಮನುಷ್ಯನ ರೋಗಗಳಿಗೆ ಚಿಕಿತ್ಸೆ ನೀಡುವ ಲಕ್ಷ ವೈದ್ಯರಿಗಿಂತ ಸಮಾಜದ ವೈದ್ಯ ಅತಿ ಮುಖ್ಯವಾಗಿದ್ದಾನೆ. ಸಮಾಜದ ಒಳಿತು, ಕೆಡುಕುಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ವೈದ್ಯರು ಬೇಕಿದ್ದಾರೆ ಎಂದು ನುಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕಿ ದಯಾಗಂಗನಘಟ್ಟ ಅವರು, ಗ್ರಾಮೀಣ ಭಾಷೆ ನನಗೆ ಹೆಮ್ಮೆ ತಂದಿದೆ. ಆ ಭಾಷೆಯ ಪದಗಳು ಯಾವಾಗಲೂ ನುಸುಳುತ್ತವೆ. ಇದರಿಂದ ನನ್ನತನ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಹೊರತು, ಕೀಳರಿಮೆ ಮೂಡಿಸಿಲ್ಲ. ಆ ಭಾಷೆಯಿಂದಲೇ ಗ್ರಾಮೀಣ ಭಾಗದ ಜನರ ಸಂಸ್ಕೃತಿ ಕಟ್ಟಿಕೊಡಬಹುದಾಗಿದೆ ಎಂದರು.
ವಿಮರ್ಶಕ ಡಾ.ಸುಭಾಷ್ ರಾಜಮಾನೆ, ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಅಧ್ಯಕ್ಷೆ ಎಚ್.ಆರ್.ಸುಜಾತಾ, ಆಜೀವ ಸದಸ್ಯೆ ಡಿ.ಪಿ.ರಾಜಮ್ಮ ರಾಮಣ್ಣ, ಸಾಹಿತಿ ಚಂದ್ರೇಗೌಡ ಮೊದಲಾದ ಗಣ್ಯರು ಉಪಸ್ಥಿತರಿದ್ದರು.