ಬೆಂಗಳೂರು: ‘ಸಿಲಿಕಾನ್ ಸಿಟಿಯು ಡ್ರ್ಯಾಗ್ ಮಾಫಿಯಾದ ಹಿತದಲ್ಲಿದೆ’ ಎಂಬ ಅಪವಾದದಿಂದ ಬೆಂಗಳೂರನ್ನು ಮುಕ್ತಗೊಳಿಸಲು ಪೊಲೀಸರು ಸಮರವನ್ನು ಬಿರುಸುಗೊಳಿಸಿದ್ದಾರೆ. ನಿಷ್ಠುರ ಕಾರ್ಯಾಚರಣೆಗೆ ಹೆಸರಾಗಿರುವ ಬಿ.ದಯಾನಂದ್ ಅವರು ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಳುವುತ್ತಿದ್ದಂತೆಯೇ ಡ್ರಗ್ಸ್ ಮಾಫಿಯಾ ವಿರುದ್ದದ ಕಾರ್ಯಾಚರಣೆಯೂ ಬಿರುಸುಗೊಂಡಿದೆ.
ಕ್ಷಿಪ್ರ ಕಾರ್ಯಾಚರಣೆಯೊಂದರಲ್ಲಿ ಬೆಂಗಳೂರು ನಗರಕ್ಕೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕರ್ನಾಟಕಕ್ಕೇ ಮಾದಕ ವಸ್ತು ಪೂರೈಸುವ ಜಾಲವನ್ನು ಬೆನ್ನಟ್ಟಿದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ, ಡಿಸಿಪಿ ಯತೀಶ್‌ಚಂದ್ರ ಹಾಗೂ ಎಸಿಪಿ ರೀನಾ ಸುವರ್ಣ ಅವರನ್ನೊಳಗೊಂಡ ಖಾಕಿ ತಂಡ ಹೈದರಾಬಾದ್ ಸಹಿತ ನೆರೆ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಡ್ರಗ್ ಮಾಫಿಯಾದ ಮೂಲವನ್ನೇ ಪತ್ತೆ ಮಾಡಿದ್ದಾರೆ. ಮೂವರು ಕುಳಗಳನ್ನು ಸೆರೆಹಿಡಿದಿರುವ ಪೊಲೀಸರು ಬರೋಬ್ಬರಿ 1,500 ಕೆಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಈ ಮಾದಕ ವಸ್ತುವಿವ ಬೆಲೆಯೇ ಬರೋಬ್ಬರಿ 12 ಕೋಟಿ ರೂಪಾಯಿ.
ರಾಜ್ಯದ ವಿವಿಧೆಡೆ ಪೊಲೀಸ್ ಸೈನ್ಯದ ಸಾರಥ್ಯ ವಹಿಸಿದ್ದ ಬಿ.ದಯಾನಂದ್ ಅವರು ಪಾತಕ ಲೋಕದ ಸಾಮ್ರಾಜ್ಯವನ್ನು ಮಟ್ಟಹಾಕಿರುವ ಪ್ರವೀಣರು. ಕೆಲವು ವರ್ಷಗಳ ಹಿಂದೆ ಬೆಂಗಳೂರು ಸಿಸಿಬಿಯ ಮುಖ್ಯಸ್ಥರಾಗಿದ್ದಾಗ ಭಯೋತ್ಪಾದಕ ಜಾಲವನ್ನು ಪತ್ತೆಮಾಡಿ ಹಲವರನ್ನು ಸೆರೆಹಿಡಿದು ತಂಡೋಪತಂಡವಾಗಿ ಜೈಲಿಗೆ ಅಟ್ಟಿದ್ದರು. ಇದೀಗ ಅದೇ ಮಾದರಿಯಲ್ಲೇ ಬೆಂಗಳೂರಿಗೆ ಸವಾಲಾಗಿರುವ ಡ್ರಗ್ಸ್ ಮಾಫಿಯಾ ಮೂಲೋಚ್ಚಾಟನೆಗೆ ಕಮೀಷನರೇಟ್ ಪೊಲೀಸರು ಪಣ ತೊಟ್ಟಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂಬುದು ಸಾರ್ವಜನಿಕರ ಪ್ರತಿಪಾದನೆ.
ಸಿನಿಮೀಯ ರೀತಿ ಕಾರ್ಯಾಚರಣೆ:
ಡ್ರಗ್ಸ್ ಮಾಫಿಯಾ ವಿರುದ್ದದ ಕಾರ್ಯಾಚರಣೆ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ಒದಗಿಸಿದ ಪೊಲೀಸ್ ಆಯುಕ್ತ ಬಿ,ದಯಾನಂದ್, ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ರೀನಾ ಸುವರ್ಣ ನೇತೃತ್ವದ ಪೊಲೀಸರು ಅಂತಾರಾಜ್ಯ ಗಾಂಜಾ ಮಾರಾಟ ಜಾಲವನ್ನು ಪತ್ತೆಹಚ್ಚಿ ಡ್ರಗ್ ಫೆಡ್ಲರ್‌ಗಳನ್ನು ಬಂಧಿಸಿ ಭರ್ಜರಿ ಬೇಟೆಯಾಡಿದ್ದಾರೆ. ಈ ಸಿಸಿಬಿ ಪೊಲೀಸರು 12 ಕೋಟಿ ರೂ.ಮೌಲ್ಯದ ಗಾಂಜಾ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಮೂವರು ಪ್ರಮುಖ ಫೆಡ್ಲರ್‌ಗಳನ್ನು ಬಂಧಿಸಲಾಗಿದ್ದು, ಬೆಂಗಳೂರಿನ ಸಲ್ಮಾನ್ (22), ಆಂಧ್ರದ ಲಕ್ಷ್ಮಿ ಮೋಹನ್‌ದಾಸ್ (23) ಹಾಗೂ ರಾಜಸ್ತಾನದ ಚಂದ್ರಬಾನ್ ಬಿಷ್ಣೋಹಿ (24) ಅವರಿಂದ ರಹಸ್ಯ ಮಾಹಿತಿಗಳನ್ನು ಕಲೆಹಾಕಲಾಗಿದೆ. ಎಂಬಿಎ ವ್ಯಾಸಂಗ ಮಾಡುತ್ತಿರುವ ಆರೋಪಿ ಚಂದ್ರಬಾನ್ ಬಿಷ್ಣೋಹಿ ಹಾಗೂ ಬಿಎ ಪದವೀಧರನಾಗಿರುವ ಲಕ್ಷ್ಮಿ ಮೋಹನ್‌ದಾಸ್ ಅವರು ಸಲ್ಮಾನ್ ಜತೆ ಸೇರಿ ಹೊರ ರಾಜ್ಯಗಳಲ್ಲಿ ಕಡಿಮೆ ದರದಲ್ಲಿ ಗಾಂಜಾ ಖರೀದಿಸಿ ಬೆಂಗಳೂರಿಗೆ ತಂದು ಭಾರೀ ಪ್ರಮಾಣದಲ್ಲಿ ಶೇಖರಿಸಿ ವಿವಿಧ ರೂಪಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಆಯುಕ್ತ ದಯಾನಂದ್ ತಿಳಿಸಿದರು.
ಹೀಗೆ ಸಾಗಿತ್ತು ಖಾಕಿ ಬೇಟೆ:
ಚಾಮರಾಜಪೇಟೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಸಲ್ಮಾನ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಗಾಂಜಾ ಮಾರಾಟ ಸಕ್ರಿಯ ಜಾಲ ಹೇಗಿದೆ ಎಂಬ ಬಗ್ಗೆ ಗೊತ್ತಾಯಿತು. ಆತನನ್ನು ವಿಚಾರಣೆ ನಡೆಸಿ ಮತ್ತಿಬ್ಬರನ್ನು ಸೆರೆ ಹಿಡಿಯಲಾಯಿತು. ಅವರು ನೀಡಿದ ಸುಳಿವನ್ನಾಧರಿಸಿ, ಆಂಧ್ರಪ್ರದೇಶದ ವಿಶಾಖಪಟ್ಟಣದ ಸಮೀಪ ಮೂರು ವಾರಗಳ ಕಾಲ ಹಗಲಿರುಳು ಕಾರ್ಯಾಚರಣೆ ನಡೆಸಿ ಚಂದ್ರಬಾನ್ ಬಿಷ್ಣೋಹಿ ಹಾಗೂ ಲಕ್ಷ್ಮಿ ಮೋಹನ್‌ದಾಸ್‌ನನ್ನು ಸೆರೆಹಿಡಿಯಲಾಗಿದೆ.
ಈ ಆರೋಪಿಗಳು ಕಾಡಿನಿಂದ ಗಾಂಜಾವನ್ನು ಸ್ಥಳೀಯರಿಂದ ಖರೀದಿಸಿ ವಿವಿಧೆಡೆ ಪೂರೈಸುತ್ತಿದ್ದರು. ಗೂಡ್ಸ್ ವಾಹನದಲ್ಲಿ ಸಾಗಿಸುವಾಗ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಕಣ್ತಪ್ಪಿಸಲು ವಾಹನದ ಹಿಂಬದಿಯಲ್ಲಿ ರಹಸ್ಯ ಕಂಪಾರ್ಟ್‌ಮೆಂಟ್ ಮಾಡಿಸಿಕೊಂಡಿದ್ದರು. ಪೊಲೀಸರಿಗೆ ಅನುಮಾನ ಬರಬಾರದೆಂಬ ಉದ್ದೇಶದಿಂದ ಗಾಂಜಾವನ್ನು ಫ್ಲಿಪ್‌ಕಾರ್ಟ್, ರಟ್ಟಿನ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಸಾಗಾಣಿಕೆ ಮಾಡುತ್ತಿದ್ದರು. ಈ ಸಂಗತಿಗಳನ್ನು ಆರೋಪಿಗಳೇ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ದಯಾನಂದ್ ವಿವರಿಸಿದ್ದಾರೆ.
ಯಾರಿವರು ರೀನಾ ಸುವರ್ಣ?
ಜೆ.ಸಿ.ನಗರ ಎಸಿಪಿಯಾಗಿದ್ದಾಗ ಬೆಂಗಳೂರಿನಲ್ಲಿ ರಹಸ್ಯವಾಗಿ ಬೇರುಬಿಟ್ಟಿದ್ದ ಡ್ರಗ್ಸ್ ಪೆಡ್ಲರ್ ಗಳನ್ನು ಮಟ್ಟಹಾಕಿ ಹಲವರನ್ನು ಜೈಲಿಗೆ ಅಟ್ಟಿದ್ದರು. ಡ್ರಗ್ಸ್ ವಿರುದ್ದದ ಸರಣಿ ಕಾರ್ಯಾಚರಣೆಗಳು ಅವರ ಸಾಧನೆಯ ಮೈಲಿಗಲ್ಲಾಗಿದೆ. ಇದೀಗ ಸಿಸಿಬಿಯಲ್ಲೂ ನಡೆದಿರುವ ಅವರ ಈ ಕಾರ್ಯಾಚರಣೆಯ ಯಾಗೋಗಾಥೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.