ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಸಮಾರಂಭದ ಹಿನ್ನೆಲೆಯಲ್ಲಿ ಇಡೀ ದೇಶವೇ ಹಬ್ಬ ಆಚರಿಸುತ್ತಿದೆ. ಅಂತಹಾ ಕ್ಷಣದಿಂದ ವಿದ್ಯಾರ್ಥಿಗಳು, ಯುವಜನರು, ಸರ್ಕಾರಿ ನೌಕರರು, ವಕೀಲರು ಸೇರಿದಂತೆ ರಾಜ್ಯದ ಜನರು ವಂಚಿತರಾಗಬಾರದು ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಎಸ್ ರೆಡ್ಡಿ ಪ್ರತಿಪಾದಿಸಿದ್ದಾರೆ. ಜನರ ಭಾವನೆಯನ್ನು ಅರಿತು ಅಯೋಧ್ಯೆಯ ಶ್ರೀರಾಮ ದೇಗುಲ ಲೋಕಾರ್ಪಣೆಯಂದು ಕರ್ನಾಟಕದಲ್ಲೂ ರಜೆ ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸಾಮಾಜಿಕ ಹಿತಾಸಕ್ತಿಗೆ ಅನುಗುಣವಾಗಿ ಆಗಾಗ್ಗೆ ಸರ್ಕಾರದ ಗಮನ ಕೇಂದ್ರೀಕರಿಸುತ್ತಿರುವ ಬೆಂಗಳೂರು ವಕೀಲರ ಸಂಘ ಈ ಬಾರಿ ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲೂ ಸರ್ಕಾರದ ಮೇಲೆ ಒತ್ತಡ ಹೇರಿದೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಎಸ್ ರೆಡ್ಡಿ, ಇಡೀ ಕರ್ನಾಟಕದ ಜನರು 22-01-2024 ರಂದು ಶ್ರೀರಾಮ ಪ್ರತಿಷ್ಠಾಪನಾ ದಿವಸ್ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಠಾಪನೆಯ ಪ್ರಕ್ರಿಯೆಯನ್ನು ವೀಕ್ಷಿಸುವ ಕಾತುರದಲ್ಲಿದ್ದಾರೆ. ಅಂತಹ ಸನ್ನಿವೇಶದಿಂದ ಜನರು ವಾಚಿತರಾಗಬಾರದು. ಹಾಗಾಗಿ ಕೇಂದ್ರ ಸರ್ಕಾರದ ಸೂಚನೆಯಂತೆ ಅರ್ಧ ದಿನ ರಜೆ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಮನ ಆದರ್ಶ, ತತ್ವಬದ್ಧ ಜೀವನವು ಭಾರತೀಯ ಸಮಾಜದ ಮೇಲೆ ಪ್ರಭಾವ ಬೀರಿದೆ ಮತ್ತು ಉದಾತ್ತ ಮತ್ತು ಶ್ರೇಷ್ಠ ಮೌಲ್ಯಗಳಿಂದ ತುಂಬಿದೆ. ಕರ್ನಾಟಕದ ಹೆಚ್ಚಿನ ಜನರು ಭಗವಾನ್ ಶ್ರೀ ರಾಮಚಂದ್ರನೊಂದಿಗೆ ಅಗಾಧ ಭಕ್ತಿ ಹೊಂದಿದ್ದಾರೆ. ಹಾಗಾಗಿ ಶ್ರೀರಾಮ ದೇಗುಲ ಲೋಕಾರ್ಪಣೆಯಂದು ರಜೆ ನೀಡಬೇಕೆಂದು ವಿವೇಕ್ ಎಸ್ ರೆಡ್ಡಿ ಅವರು ಸಿಎಂಗೆ ಬರೆದಿರುವ ಪತ್ರದಲ್ಲಿ ಗಮನಸೆಳೆದಿದ್ದಾರೆ. ಕರ್ನಾಟಕದ ಜನರ ಇಚ್ಛೆಗೆ ಸ್ಪಂದಿಸಿ ಜನವರಿ 22 ರಂದು ಅರ್ಧ ದಿನ ಅಥವಾ ಪೂರ್ಣ ದಿನದ ರಜೆ ಘೋಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.


























































