ಬೆಂಗಳೂರು: ಬಿಜೆಪಿಯ ಭದ್ರಕೋಟೆ ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 10 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕೈ ಮೇಲುಗೈ ಸಾಧಿಸಿದೆ. 7 ಕಡೆ ಕಾಂಗ್ರೆಸ್ ಜಯಭೇರಿ ಭಾರಿಸಿದರೆ, ಎರಡು ಕಡೆ ಜೆಡಿಎಸ್‌ಗೆ ಅಧಿಕಾರ ಸಿಕ್ಕಿದೆ. ರಾಜ್ಯದ ಆಡಳಿತಾರೂಢ ಪಕ್ಷ ಬಿಜೆಪಿಯು ಒಂದೆಡೆ ಮಾತ್ರ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಪೈಕಿ 10 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತವರು ಜಿಲ್ಲೆಯ ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುತದೊಂದಿಗೆ ಜಯಭೇರಿ ಭಾರಿಸಿದೆ. ಒಟ್ಟು 31 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 19 ಹಾಗೂ ಜೆಡಿಎಸ್ 11 ವಾರ್ಡ್ನಲ್ಲಿ ಗೆಲುವು ಸಾಧಿಸಿದೆ. ಒಂದು ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿ ಅಲ್ಲಿ ಶೂನ್ಯ ಸಾಧನೆ ಮಾಡಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದೆ. ಅಲ್ಲಿ ಬಿಜೆಪಿ 13 ಸ್ಥಾನಗಳನ್ನಷ್ಟೇ ಗೆದ್ದು ಕೈ ಮುಂದೆ ಮಂಡಿಯೂರಿದೆ.
ಸಿಎಂ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲೂ ಮತದಾರರು ಬಿಜೆಪಿಗೆ ಸೋಲಿನ ರುಚಿಯುನಿಸಿದ್ದಾರೆ. ಭದ್ರಾವತಿ ನಗರಸಭೆಯ 35 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿದ್ದರೆ, 4 ಸ್ಥಾನಗಳನ್ನಷ್ಟೇ ಪಡೆದ ಬಿಜೆಪಿ ಅಲ್ಲಿನ ಅಧಿಕಾರವನ್ನು ಕೈ ನಾಯಕರಿಗೆ ಬಿಟ್ಟುಕೊಟ್ಟಿದ್ದಾರೆ.
ತೀರ್ಥಹಳ್ಳಿಯಲ್ಲೂ ಅದೇ ಸನ್ನಿವೇಶ. ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಯ 15 ಸ್ಥಾನಗಳ ಪೈಕಿ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದುಕೊಂಡಿದೆ. ಅಲ್ಲಿ ಬಿಜೆಪಿ 6 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಂಡಿದೆ.