ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ತಮ್ಮ ಖುರ್ಚಿ ಭದ್ರವಾಗಿದೆ ಎನ್ನುವಷ್ಟರಲ್ಲೇ ಕಾನೂನು ಕಂಟಕ ಎದುರಾಗುತ್ತಲೇ ಇವೆ. ಜಿಂದಾಲ್ ವಿವಾದ, ಕೆಆರ್‌ಐಡಿಎಲ್ ಪ್ರಕರಣಗಳು ಬಿಎಸ್‌ವೈ ಸರ್ಕಾರಕ್ಕೆ ಸವಾಲು ಎಂಬಂತಿರುವಾಗಲೇ, ಒಂದರ ಹಿಂದೊಂದರಂತೆ ಭ್ರಷ್ಟಾಚಾರ ಪ್ರಕರಣಗಳು ಯಡಿಯೂರಪ್ಪ ಪಾಲಿಗೆ ಮುಂದೇನು ಎಂಬ ಚಿಂತೆಗೆ ಕಾರಣವಾಗಿದೆ.
ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬೆಂಗಳೂರಿನ ನ್ಯಾಯಾಲಯವು ಜುಲೈ 8ಕ್ಕೆ ಆದೇಶವನ್ನು ಕಾಯ್ದಿರಿಸಿದ್ದರೆ, ಮತ್ತೊಂದೆಡೆ ಉದ್ಯಾನ ನಗರಿಯ ಬೆಳ್ಳಂದೂರು ಹಾಗೂ ದೇವರಬೀಸನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲೂ ಹಿನ್ನಡೆಯಾಗಿದೆ. ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಬಿಎಸ್‌ವೈ ಅವರಿಗೆ ಕ್ಲೀನ್ ಚಿಟ್ ನೀಡಿತ್ತಾದರೂ ನ್ಯಾಯಾಲಯವು ಬಿ ರಿಪೋರ್ಟ್ ತಿರಸ್ಕರಿಸಿ ಮತ್ತೊಮ್ಮೆ ತನಿಖೆ ನಡೆಸುವಂತೆ ಆದೇಶಿಸಿದೆ.
ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಅವರಿಗೆ ಕಾನೂನು ತೊಡಕುಗಳ ಪ್ರಸಂಗವೇ ಎದುರಾಗುತ್ತಿದ್ದು ಅವರ ಆಪ್ತರಲ್ಲೂ ಆತಂಕ ಸೃಷ್ಟಿಸಿದೆ.
ಏನಿದು ಪ್ರಕರಣ..?
ಸುಮಾರು 20 ವರ್ಷಗಳ ಹಿಂದೆ ಅಂದರೆ 2000-2001ನೇ ಸಾಲಿನಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ, ಮಾರತಹಳ್ಳಿ, ಬೆಳ್ಳಂದೂರು, ಸರ್ಜಾರಪುರ, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಸಹಿತ ವಿವಿಧ ಗ್ರಾಮಗಳಲ್ಲಿನ ಸುಮಾರು 434 ಎಕರೆ ಪ್ರದೇಶವನ್ನು ಸ್ವದೀನಪಡಿಸಿ ಐಟಿ ಕಾರಿಡಾರ್ ರಚನೆಗೆ ಘೋಷಿಸಲಾಗಿತ್ತು. ಈ ಸಂಬಂಧ ಕೆಐಎಡಿಬಿ ಅಧಿಸೂಚನೆಯನ್ನು ಹೊರಡಿಸಿತ್ತು. ಕೆಲವು ವರ್ಷಗಳ ನಂತರ ಬಿ.ಎಸ್.ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ದೇವರಬೀಸನಹಳ್ಳಿ, ಬೆಳ್ಳಂದೂರು ಗ್ರಾಮಗಳ ಸುಮಾರು 8 ಎಕರೆ 10 ಗುಂಟೆ ಜಮೀನನ್ನು ಡಿನೋಟಿಫಿಕೇಷನ್ ಮಾಡಲು ಆದೇಶಿಸಲಾಗಿತ್ತು. ಈ ಆದೇಶವು ಅಕ್ರಮ ಎಂದು ಆರೋಪಿಸಿ ವಾಸುದೇವ ರೆಡ್ಡಿ ಎಂಬವರು ಕೋರ್ಟ್ ಮೊರೆ ಹೋಗಿದ್ದರು.
- 2013ರ ಜುಲೈ 10ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಾಸುದೇವ ರೆಡ್ಡಿ ಕಾನೂನು ಸಮರ ಆರಂಭಿಸಿದರು.
- 2015ರ ಫೆ.18ರಂದು ಲೋಕಾಯುಕ್ತ ವಿಶೇಷ ಕೋರ್ಟ್ ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶಿಸಿತ್ತು.
- 2015ರ ಫೆ.21ರಂದು ಲೋಕಾಯು ಪೊಲೀಸರು ಯಡಿಯೂರಪ್ಪ ಸಹಿತ ಹಲವರ ವಿರುದ್ದ ಎಫ್ಐಆರ್ ದಾಖಲಿಸಿದ್ದರು.
- 2019ರ ಜ.25ರಂದು ಈ ಎಫ್ಐಆರ್ ಪ್ರಶ್ನಿಸಿ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಬಿಎಸ್‌ವೈ ಪ್ರಯತ್ನ ಸಫಲವಾಗಲಿಲ್ಲ. ಹೈಕೋರ್ಟ್ ಆದೇಶದ ಬಳಿಕ ತನಿಖೆ ಕೈಗೊಂಡ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಯಡಿಯೂರಪ್ಪ ಸೇಫ್ ಎನ್ನುವಷ್ಟರಲ್ಲೇ, ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಸುಮಾರು 10,000 ಪುಟಗಳ ಬಿ-ರಿಪೋರ್ಟನ್ನು ನ್ಯಾಯಾಲಯ ತಿರಸ್ಜರಿಸಿದೆ.
ಶನಿವಾರ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಮರು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದೆ. ಸಮಗ್ರ ತನಿಖೆಯ ಅಗತ್ಯವಿದೆ ಎಂಬ ದೂರುದಾರ ವಾಸುದೇವ ರೆಡ್ಡಿ ಪರ ವಕೀಲ ಕೆ.ವಿ.ಧನಂಜಯ್ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶದ ಅನುಸಾರವಾಗಿ ಸೂಕ್ತ ರೀತಿ ಮರು ತನಿಖೆ ಮಾಡಿ ಅಂತಿಮ ವರದಿ ಸಲ್ಲಿಸುವಂತೆ ಕೋರ್ಟ್ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದೆ.