ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಕ್ಸೆಪಾರ್ಹ ಪದಬಳಕೆ ಮಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವಿಧಾನ ಪರಿಷತ್ ಬಿಜೆಪಿ ಶಾಸಕ ಸಿ.ಟಿ.ರವಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬೆಳಗಾವಿ 5ನೇ ಜೆಎಂಎಫ್‌ಸಿ ಕೋರ್ಟ್ ಆದೇಶಿಸಿದೆ.
ಗುರುವಾರ ವಿಧಾನ ಪರಿಷತ್ ಕಲಾಪ ಸಂದರ್ಭದಲ್ಲಿ ನಡೆದ ಪ್ರಕರಣ ಹಿನ್ನೆಲೆಯಲ್ಲಿ ಸಿ.ಟಿ.ರವಿ ಅವರನ್ನು ಬಂಧಿಸಿರುವ ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಶುಕ್ರವಾರ ಬೆಳಗ್ಗೆ ಬೆಳಗಾವಿ ಕೋರ್ಟ್‌ಗೆ ಹಾಜರುಪಡಿಸಿದರು. ಈ ವೇಳೆ ಸಿ.ಟಿ.ರವಿ ಅವರಿಗೆ ವಕೀಲರು ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಇದೇ ವೇಳೆ, ಬಂಧಿತ ಶಾಸಕರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ತನಿಖಾಧಿಕಾರಿಗಳು ಮನವಿ ಮಾಡಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಈ ಪ್ರಕರಣದ ಜಾಮೀನು ನೀಡಲು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ತುರ್ತಾಗಿ ಸಿಟಿ ರವಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಮಾಡಬೇಕೆಂದು ಆದೇಶಿಸಿದ್ದಾರೆ ಎಂದು ಸಿ.ಟಿ.ರವಿ ಪರ ವಕೀಲ ಬಿ.ಎಂ ಜಿರಳಿ ತಿಳಿಸಿದ್ದಾರೆ.