ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಲೋಕಸಭಾ ಕ್ಷೇತ್ರದ ಉಪಚುನಾವಣಾ ಅಖಾಡ ಗರಿಗೆದರಿದೆ. ಬಿಜೆಪಿಯು ಅನುಕಂಪದ ಅಲೆಯ ವರದಾನ ಪಡೆಯಲು ಮುಂದಾಗಿದ್ದು ಸುರೇಶ್ ಅಂಗಡಿ ಪತ್ನಿ ಮಂಗಳಾ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ. ಇದಕ್ಕೆ ಸೆಡ್ಡು ಹೊಡೆಯಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್, ಸತೀಶ್ ಜಾರಕಿಹೊಳಿಯವರನ್ನು ಅಖಾಡಕ್ಕಿಳಿಸಲಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿಯವರು ಸೋಮವಾರ ನಾಮಪತ್ರ ಸಲ್ಲಿಸಲಿದ್ದು ಅಂದು ಶಕ್ತಿ ಪ್ರದರ್ಶನಕ್ಕೆ ಕೈ ನಾಯಕರು ಸಿದ್ದತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸಹಿತ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಮಾಹಿತಿ ಹಂಚಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಭಾನುವಾರ ಸಂಜೆ ತಾವು ಬೆಳಗಾವಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ನಮ್ಮ ಶಾಸಕಾಂಗ ಪಕ್ಷದ ನಾಯಕರು ಆಗಮಿಸಲಿದ್ದಾರೆ. ನಾವಿಬ್ಬರೂ ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು, ಅಲ್ಲಿಂದ ಮಸ್ಕಿಗೆ ತೆರಳಲಿದ್ದೇವೆ. ಮರುದಿನ ಬಸವಕಲ್ಯಾಣಕ್ಕೆ ತೆರಳುತ್ತೇವೆ ಎಂದು ಡಿಕೆಶಿ ತಿಳಿಸಿದ್ದಾರೆ.
ಭಾನುವಾರ ಚುನಾವಣಾ ಉಸ್ತುವಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಜವಾಬ್ದಾರಿ ಹಂಚುವುದಾಗಿ ತಿಳಿಸಿರುವ ಅವರು, ಎಲ್ಲ ನಾಮಪತ್ರ ಸಂದರ್ಭದಲ್ಲೂ ಇರುತ್ತೇವೆ ಎಂದು ಪ್ರಕಟಿಸಿದ್ದಾರೆ.