ಮಂಗಳೂರು: ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯಕ್ ಬಳಗಕ್ಕೆ ಭೀಮ ಬಲ ಬಂದಿದೆ. ಬಂಟ್ವಾಳ ಕ್ಷೇತ್ರದಲ್ಲಿನ ಅಚ್ಚರಿಯ ರಾಜಕೀಯ ವಿದ್ಯಮಾನ ಕಾಂಗ್ರೆಸ್‌ಗೆ ಶಾಕ್ ಮೇಲೆ ಶಾಕ್ ಎಂಬಂತಾಗಿದೆ.
ಬಂಟ್ವಾಳ ತಾಲೂಕಿನ ಸರಣಿ ಅಭಿವೃದ್ಧಿ ಯೋಜನೆಗಳಿಗೆ ಕೈ ಕಾರ್ಯಕರ್ತರಿಂದಲೇ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ಬೆಳವಣಿಗೆ ನಡುವೆಯೇ ಹಲವಾರು ಮಂದಿ ಕಾಂಗ್ರೆಸ್ ನಾಯಕರು ಕಮಲ ಪಕ್ಷವನ್ನು ಅಪ್ಪಿಕೊಂಡಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿನ ಈ ಬೆಳವಣಿಗೆ ಅಚ್ಚರಿ ಹಾಗೂ ಕುತೂಹಲಕಾರಿ ಎಂಬಂತಿದೆ.
ಸ್ಥಳೀಯ ನಾಯಕರ ಬಗ್ಗೆ ಅಸಮಧಾನಗೊಂಡು ಕಾಂಗ್ರೆಸ್ ಪ್ರಮುಖ ನಾಯಕರಾದ ಜಗದೀಶ್ ಶೆಟ್ಟಿ ಮವಂತೂರು, ಮಾಜಿ ತಾ.ಪಂ ಸದಸ್ಯ ಹಂಝ ಮಂಚಿ, ಚಂದ್ರಹಾಸ ಕರ್ಕೆರಾ ಅರಳ, ಮುಸ್ತಾಫ ಮೂಲರಪಟ್ಣ ಸಹಿತ ಹತ್ತಾರು ಮಂದಿ ಕಾಂಗ್ರೆಸ್ ಧುರೀಣರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ಡೊಂಬಯ ಅರಳ, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಸೀತಾರಾಮ ಪೂಜಾರಿ ಮೊದಲಾದವರು ಈ ನಾಯಕರನ್ನು ಕೇಸರಿ ಪಾಳಯಕ್ಕೆ ಬರಮಾಡಿಕೊಂಡರು.