ಬೆಂಗಳೂರು: ಲೋಕಸಭಾ ಚುನಾವಣೆ ಇದೀಗ ಕುತೂಹಲ ಘಟ್ಟದಲ್ಲಿದೆ ಅದರಲ್ಲೂ ಬಿಜೆಪಿಯ ಭದ್ರಕೋಟೆಯಲ್ಲಿ ಕಾಂಗ್ರೆಸ್ ಧ್ವಜ ಹಾರಿಸಲು ಬೆಂಗಳೂರು ದಕ್ಷಿಣ ಕ್ಷೇತ್ರದ ಕೈ ಅಭ್ಯರ್ಥಿ ಸೌಮ್ಯ ರೆಡ್ಡಿ ಶತಪ್ರಯತ್ನದಲ್ಲಿದ್ದಾರೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರ ಪುತ್ರಿ ಸೌಮ್ಯ ರೆಡ್ಡಿ ಅವರು ತಾವು ಸ್ಪರ್ಧಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರಾದ್ಯಂತ ನಿರಂತರ ಪ್ರಚಾರ ಕೈಗೊಳ್ಳುತ್ತಿದ್ದು, ಎಲ್ಲೆಲ್ಲೂ ಜನಸಾಗರವೇ ಹರಿದುಬರುತ್ತಿದೆ., ವಿವಿಧ ಸಂಘಸಂಸ್ಥೆಗಳು ಕೂಡಾ ಸೌಮ್ಯ ರೆಡ್ಡಿ ಅವರಿಗೆ ಬೆಂಬಲ ಘೋಷಿಸಿವೆ.
ಇದೇ ವೇಳೆ, ಹಾಪ್‌ಕಾಮ್ಸ್ ರೈತರು ಹಾಗೂ ನೌಕರರ ಸಂಘ, ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಸಮ್ಮಿಲನ ವೇದಿಕೆ ಹಾಗೂ ರಾಜ್ಯ ವೈಶ್ಯ ಸಮುದಾಯ ಕೂಡಾ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಗೆ ಬೆಂಬಲ ಘೋಷಿಸಿದೆ.
ಸೋಮವಾರ ಹಾಪ್‌ಕಾಮ್ಸ್ ರೈತರು ಹಾಗೂ ನೌಕರರ ಸಂಘದ ಪ್ರಮುಖರು ಸಭೆ ನಡೆಸಿ, ಕಳೆದ 30 ವರ್ಷಗಳಿಂದಲೂ ಹಾಪ್‌ಕಾಮ್ಸ್ ಹಾಗೂ ನೌಕರರ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿ ತೋರಿ, ಹಾಫ್ ಕಾಮ್ಸ್ ಅಭಿವೃದ್ಧಿಗೆ ನಿರಂತರ ಸಹಕಾರ ನೀಡಿರುವ ಏಕೈಕ ರಾಜಕಾರಣಿ ಅಂದರೆ ಅದು ರಾಮಲಿಂಗಾರೆಡ್ಡಿ. ಅವರ ಕಾರ್ಯವನ್ನು ಸ್ಮರಿಸಿ ಅಖಂಡ ಹಾಪ್ ಕಾಮ್ಸ್ ನೌಕರರು ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಬೆಂಬಲ ಘೋಷಿಸಿದರು.
ರಾಜ್ಯ ನೇಕಾರರ ಸಮುದಾಯದ ಒಕ್ಕೂಟದ ಅಧ್ಯಕ್ಷ ಲಕ್ಷ್ಮಿ ನಾರಾಯಣಪ್ಪ ಮಾತನಾಡಿ, ರಾಜ್ಯ ಸರ್ಕಾರವು ನೇಕಾರರಿಗೆ ಉಚಿತ ವಿದ್ಯುತ್, ರೂ.2 ಲಕ್ಷದವರೆಗೆ ಶೇ.1 ರೂ ಬಡ್ಡಿ ದರದಲ್ಲಿ ಸಾಲ, ರೂ. 2 ರಿಂದ ರೂ.5 ಲಕ್ಷದ ವರೆಗೆ ಸಾಲ ನೀಡುವ ಯೋಜನೆ ಸಹಿತ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಸರ್ಕಾರಕ್ಕೆ ನಮ್ಮ ಬೆಂಬಲ ಇದೆ ಎಂದರು.
ನೇಕಾರರ ಸಮುದಾಯದ ಒಕ್ಕೂಟದ ಮುಖಂಡರಾದ ಡಾ. ಪ್ರಕಾಶ್, ವೆಂಕಟೇಶ್, ಬಾಲರಾಜ್, ಪ್ರೊ.ರಾಧಾಕೃಷ್ಣ, ಕೆ.ಎಂ ನಾಗರಾಜ್, ಮಮತಾ ದೇವರಾಜ್, ಮಂಜುಳಾ ನಾಯ್ಡು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಅತ್ತ, ಜಯನಗರದಲ್ಲಿ ರಾಜ್ಯ ಆರ್ಯ ವೈಶ್ಯ ಸಮುದಾಯದ ಮುಖಂಡರು ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಸಚಿವ ರಾಮಲಿಂಗಾ ರೆಡ್ಡಿಯವರು ವೈಶ್ಯ ಸಮಾಜದ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದು, ಹತ್ತು ಹಲವು ಕಾರ್ಯಗಳಿಗೆ ನಿರಂತರ ಸಹಕಾರ ನೀಡಿದ್ದಾರೆ. ಅವರ ಜನಪರ ಕಾರ್ಯಗಳನ್ನು ಅವರ ಮಗಳು ಕೂಡ ಮುಂದುವರೆಸುತ್ತಾರೆ ಎಂಬ ನಂಬಿಕೆ ಇದೆ ಎಂದು ಸಂಘದ ಮುಖಂಡರು ಪ್ರತಿಪಾದಿಸಿದ್ದಾರೆ. ಶಾಸಕರಾಗಿದ್ದಾಗ ಜನಾನುರಾಗಿ ಕೆಲಸ ಕಾರ್ಯಗಳನ್ನು ಮಾಡಿರುವುದನ್ನು ನೋಡಿದ್ದೇವೆ. ಆದ್ದರಿಂದ ನಮ್ಮಸಮಾಜದ ಬೆಂಬಲ ಸೌಮ್ಯರೆಡ್ಡಿ ಅವರಿಗೆ ಎಂದು ಸಂಘದ ಮುಖಂಡರು ಘೋಷಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗ ರೆಡ್ಡಿ, ಚುನಾವಣೆಯಲ್ಲಿ ಸ್ಪರ್ಧಿಸಿರುವ ಪುತ್ರಿ ಸೌಮ್ಯ ರೆಡ್ಡಿಗೆ ಬೆಂಬಲ ಸೂಚಿಸಿದ ಎಲ್ಲಾ ಸಮುದಾಯದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.