ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ, ಯುವಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು ವಿದ್ಯಾರ್ಥಿ ಸಮೂಹ ಜನಾಂದೋಲನ ಕೈಗೊಂಡಿದೆ. ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಐಸಾ) ನಡೆಸುತ್ತಿರುವ ಈ ಜನಾಭಿಮತ ಅಭಿಯಾನ ಇಡೀ ದೇಶದ ಗಮನಸೆಳೆದಿದೆ.
ಕರ್ನಾಟಕದಾದ್ಯಂತ ಬೆಂಗಳೂರು ಯೂನಿವರ್ಸಿಟಿ, ಬೆಂಗಳೂರು ಸಿಟಿ ಯೂನಿವರ್ಸಿಟಿ, ಮೌಂಟ್ ಕಾರ್ಮೆಲ್ ಕಾಲೇಜು, ಮಾಂಟ್ ಫೋರ್ಟ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ , ಅಝೀಮ್ ಪ್ರೇಂಜಿ ಯೂನಿವರ್ಸಿಟಿ, ಮಣಿಪಾಲ್ ಯೂನಿವರ್ಸಿಟಿ, ಕೊಪ್ಪಳ ಯೂನಿವರ್ಸಿಟಿ, ಶ್ರೀ ಕೃಷ್ಣದೇವರಾಯ ಯೂನಿವರ್ಸಿಟಿ (ವಿಜಯನಗರ ಜಿಲ್ಲೆ), ಮತ್ತು ಇತ್ಯಾದಿ ವಿದ್ಯಾರ್ಥಿ ಕೇಂದ್ರಗಳಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಐಸಾ) ವತಿಯಿಂದ ಫೆಬ್ರವರಿ 7ರಿಂದ 9ರ ವರೆಗೂ ‘ಯುವ ಭಾರತದ ಜನಾಭಿಮತ’ ಅಭಿಯಾನವನ್ನು ನಡೆಸಲಾಯಿತು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿದ್ಯಾರ್ಥಿ ಯುವಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು ಈ ಜನಾಭಿಮತವನ್ನು ಆಯೋಜಿಸಲಾಗಿತ್ತು. ಡಿಸೆಂಬರ್ 2023ರಿಂದ ನಡೆದ ಸಹಿ ಸಂಗ್ರಹಣಾ ಅಭಿಯಾನದಲ್ಲಿ 10 ವರ್ಷದ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿಗಳಿಗೆ ಮತ್ತು ಕೆಲಸ ಹುಡುಕುತ್ತಿರುವ ಯುವಜನರು 10 ಪ್ರಶ್ನೆಗಳನ್ನು ಮುಂದೂಡಲಾಯಿತು. ಈ ಅಭಿಯಾನದಲ್ಲಿ ಸಾರ್ವಜನಿಕ ಹಣಹೂಡಿಕೆಯ ಉನ್ನತ ಶಿಕ್ಷಣ ಕುಸಿತ, ಪ್ರಜಾಪ್ರಭುತ್ವದ ಮೇಲಿನ ದಾಳಿ, ಪ್ರತಿರೋಧದ ಧ್ವನಿಗಳ ಮೇಲಿನ ದಾಳಿ, ಕೈಗೆಟಕದ ಶಿಕ್ಷಣ, ಘನತೆಯುತ್ತ ಕೆಲಸದ ನಿರಾಕರಣೆ, ಇತ್ಯಾದಿ ಸಮಸ್ಯೆಗಳತ್ತ ಗಮನಕೇಂದ್ರೀರಿಸುವ ಪ್ರಯತ್ನ ನಡೆಯಿತು.
ಕರ್ನಾಟಕದಾದ್ಯಂತ ವಿದ್ಯಾರ್ಥಿಗಳು ಈ ಜನಾಭಿಮತದಲ್ಲಿ ಉತ್ಸಾಹದಿಂದ ಭಾಗವಹಿಸಿದರು ಮತ್ತು ಶಿಕ್ಷಣ, ಉದ್ಯೋಗ ಕಲ್ಪಿಸಬೇಕೆಂದು ತಮ್ಮ ಮತ ಚಲಾಯಿಸಿದ್ದಾರೆ. ವರ್ಷವರ್ಷ ಫಿ ಹೆಚ್ಚಳವಾಗುತ್ತಿರುವುದು ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರೆಸುವುದೇ ಕಷ್ಟವಾಗಿದೆ ಎಂದು ಹಲವಾರು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ತಿಳಿಸಿದರು. ತಮ್ಮ ಕೊನೆಯ ಶೈಕ್ಷಣಿಕ ವರ್ಷದಲ್ಲಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿದ ನಂತರ ಅವರಿಗೆ ಕೆಲಸ ಸಿಗುವುದು ಎಂಬ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಪ್ರಶ್ನೆಗಳನ್ನು ವಿದ್ಯಾರ್ಥಿ ಯುವಜನರ ಮುಂದೂಡಲಾಯಿತು.
ಯುವಜನರ ಮುಂದಿಡಲಾದ ಪ್ರಶ್ಬೆಗಳಿವು..
-
ವರ್ಷವರ್ಷಕ್ಕೂ ಫೀ ಹೆಚ್ಚಳ ಆಗುತ್ತಿರುವುದು ವಿದ್ಯಾರ್ಥಿಗಳಿಗೆ ಸರಿಯೇ?
-
ಕೇಂದ್ರ ಸರ್ಕಾರವು ಹಾಸ್ಟೆಲ್ ಮತ್ತು ಸ್ಕಾಲರ್ಷಿಪ್ ಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆಯೇ?
-
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆಯನ್ನು ಕೇಂದ್ರ ಸರ್ಕಾರವು ಈಡೇರಿಸಿದ್ದಾರೆಯೇ?
ಜನಾಭಿಮತ ನಡೆದ ಯೂನಿವೆರ್ಸಿಟಿಗಳಲ್ಲಿ ಒಟ್ಟು 2,726 ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸಿದ್ದಾರೆ. ಇದರಲ್ಲಿ, ಶೇಖಡಾ 83.40ರಷ್ಟು ವಿದ್ಯಾರ್ಥಿಗಳು ವಾರ್ಷಿಕ ಫೀ ಹೆಚ್ಚಳವು ಸರಿಯಲ್ಲ ಎಂದು ಉತ್ತರಿಸಿದ್ದಾರೆ. ಹಾಗೆಯೇ, ಶೇಖಡಾ 74.90ರಷ್ಟು ವಿದ್ಯಾರ್ಥಿಗಳು ಕೇಂದ್ರ ಸರ್ಕಾರವು ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ಸ್ಕಾಲರ್ಷಿಪ್ ವ್ಯವಸ್ಥೆಯನ್ನು ಕಲ್ಪಿಸಿರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡಾ 90.90ರಷ್ಟು ವಿದ್ಯಾರ್ಥಿಗಳು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆಯನ್ನು ಕೇಂದ್ರ ಸರ್ಕಾರವು ಈಡೇರಿಸಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕದ ವಿದ್ಯಾರ್ಥಿ ಯುವಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಙದು ಐಸಾ ಪ್ರಮುಖರು ತಿಳಿಸಿದ್ದಾರೆ.
ಸಾರ್ವಜನಿಕ ಹಣ ಹೂಡಿಕೆಯಿಂದ ಶಿಕ್ಷಣ ನಡೆಯಬೇಕು, ಫೀ ಹೆಚ್ಚಳ ತಡೆಗಟ್ಟಬೇಕು, ನಿರುದ್ಯೋಗ ಕೊನೆಗಾಣಿಸಬೇಕು, ಪ್ರವೇಶಾತಿ ಪರೀಕ್ಷೆಗಳನ್ನು ಕೇಂದ್ರೀಕರಣ ಮಾಡುವುದನ್ನು ನಿಲ್ಲಿಸಬೇಕು, NEP 2020ರನ್ನು ಹಿಂಪಡೆಯಬೇಕು, ಶಿಕ್ಷಣವನ್ನು ನೀರು ಪಾಲು ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಐಸಾ ತನ್ನ ಹೋರಾಟವನ್ನು ರೂಪಿಸುತ್ತಿದೆ. ಈ ವಿಚಾರಗಳನ್ನು ಮುಂದಿಟ್ಟುಕೊಂಡು ದೇಶ ಮಟ್ಟದಲ್ಲಿ ಜನಾಭಿಮತವನ್ನು ಸುಮಾರು 60ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ನಡೆಸಲಾಯಿತು. ರಾಷ್ಟ್ರ-ಮಟ್ಟದ ಫಲಿತಾಂಶವನ್ನು ಫೆಬ್ರವರಿ 12ಕ್ಕೆ ನವ ದೆಹಲಿಯಲ್ಲಿ ಘೋಷಿಸಲಾಗುವುದು ಎಂದು ಐಸಾ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.


























































