ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರೂಪದ ಕಾರ್ಯಕ್ರಮ.. ಥಳುಕು-ಬಳುಕಿನ ಸೌಂದರ್ಯ ಲೋಕದಲ್ಲೊಂದು ಸಾಂಸ್ಕೃತಿಕ ಸೌರಭ.. ವಾರಾಂತ್ಯದ ರಜಾ ದಿನದಂದು ನಡೆದ ಅನನ್ಯ ‘ಕನ್ನಡತಿ ಉತ್ಸವ’ ನಾಡಿನ ಗಮನಸೆಳೆಯಿತು.
ಅವಳ ಹೆಜ್ಜೆಯ 6ನೇ ವರ್ಷದ ‘ಕನ್ನಡತಿ ಉತ್ಸವ’ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನೆರವೇರಿತು. ‘ಮಿಸ್ ಮಹಾಲಕ್ಷ್ಮೀ” ಎಂಬ ಪ್ಯಾಷನ್ ಶೋ ಎಲ್ಲರ ಕುತೂಹಲದ ಕೇಂದ್ರಬಿಂದುವಾಯಿತು. ಇದು ಥಳುಕು-ಬಳುಕಿನ ವಯ್ಯಾರದ ಫ್ಯಾಷನ್ ಶೋ ಆಗಿರಲಿಲ್ಲ; ಸಾಧನೆಯ ಹಾದಿಯಲ್ಲಿರುವ ಹೊಂಗನಸುಗಳಿಗೆ ಶಕ್ತಿಯಾಗಿ ನಿಲ್ಲುವ ಪ್ಯಾಷನ್ ಶೋ (Passion Show ) ಅದಾಗಿತ್ತು.

ಅವಳ ಹೆಜ್ಜೆಯ ಸಂಸ್ಥಾಪಕಿ ಶಾಂತಲಾ ದಾಮ್ಲೆ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರನೇಕರು ಭಾಗಿಯಾಗಿದ್ದರು.
ವೈದ್ಯೆಯರು, ವಕೀಲೆಯರು, ಫಾರ್ಮಾಸಿಸ್ಟ್‌ಗಳು, ಕೇಶ ವಿನ್ಯಾಸಕಿಯರು, ಬಾಹ್ಯಾಕಾಶ ವಿಜ್ಞಾನಿಗಳು, ವನ್ಯಜೀವಿ ಛಾಯಾಗ್ರಾಹಕಿ, ಸಮಾಜ ಸೇವಕರು, ಕಸೂತಿ ಪ್ರತಿಭಾನ್ವಿತರು ಈ ಹಬ್ಬದಲ್ಲಿ ಸಮಾಗಮವಾಗಿದ್ದರು.
ಶಿಕ್ಷಣ, ಫ್ಯಾಷನ್ ಡಿಸೈನಿಂಗ್, ಮಾಡಲಿಂಗ್, ಜಿಮ್, ಯೋಗ, ಸಾಹಿತ್ಯ, ಗಾಯನ, ಭರತನಾಟ್ಯ, ಕಥಕ್, ಯಕ್ಷಗಾನ, ಚಿತ್ರಕಲೆ, ನಾಟಕ, ಟ್ರಕ್ಕಿಂಗ್, ಆಭರಣ ವಿನ್ಯಾಸ ಮುಂತಾದ ಕ್ಷೇತ್ರಗಳನ್ನು ಪ್ರತಿನಿಧಿಸಿದ ಅನೇಕರು ಇದರಲ್ಲಿ ಪ್ರತಿಭಾನ್ವಿತರೇ ಆಗಿದ್ದರು.
ಪ್ಯಾಷನ್ ಶೋನಲ್ಲಿ 7 ವರ್ಷದ ಹೆಣ್ಮಕ್ಕಳಿಂದ ಹಿಡಿದು 75 ವರ್ಷ ವಯೋಮಾನದವರೆಗಿನ ಮಹಿಳೆಯರಿಗೆ ತಮ್ಮ ತಮ್ಮ ಕನಸು, ಕಸುಬು ಮತ್ತು ಕಲೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ವೇದಿಕೆಯಲ್ಲಿ ಕ್ರಿಯಾಶೀಲವಾಗಿ ವಿವಿಧ ಉಡುಗೆ ತೊಡುಗೆಗಳ ಮೂಲಕ ರ‍್ಯಾಂಪ್ ಮೇಲೆ ಮಹಿಳಾ ಮಣಿಗಳು ತಮ್ನ ಪ್ರತಿಭೆ ಪ್ರದರ್ಶಿಸಿ ‘ಕನ್ನಡತಿ ಹಬ್ಬಕ್ಕೆ’ ಆಕರ್ಷಣೆ ತುಂಬಿದರು.



























































