ಬೆಂಗಳೂರು: ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆದು ಸಿದ್ದರಾಮಯ್ಯ ಅವರು ಗದ್ದುಗೆ ಏರಿದ್ದಾರೆ. ಆದರೆ ‘ಎಷ್ಟು ಕಾಲಾವಧಿಗೆ ಅವರು ಸಿಎಂ?’ ಎಂಬ ಚರ್ಚೆ ಆರಂಭವಾಗಿದೆ. 30:30 ಫಾರ್ಮುಲಾದಂತೆ ಮೊದಲೆರಡು ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ; ಕೊನೆಯ ಎರಡೂವರೆ ವರ್ಷಕಾಲ ಸಿಎಂ ಸ್ಥಾನವನ್ನು ಡಿಕೆಶಿ ಮುನ್ನಡೆಸುವ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ರಹಸ್ಯ ತೀರ್ಮಾನವಾಗಿದೆ ಎನ್ನಲಾಗುತ್ತಿದೆ.
ಈ ನಡುವೆ, ಸಂಪೂರ್ಣ 5 ವರ್ಷಗಳ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಸಚಿವ ಎಂಬಿ ಪಾಟೀಲ್ ನೀಡಿರುವ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಕೋಲಾಹಲ ಎಬ್ಬಿಸಿದ್ದು, ಈ ಹೇಳಿಕ ಬಗ್ಗೆ ಹೈಕಮಾಂಡ್ ಕೂಡಾ ಸಿಡಿಮಿಡಿಗೊಂಡಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ 30:30 ಸೂತ್ರದ ಪ್ರಸ್ತಾಪವಿದೆ ಎಂಬುದಕ್ಕೆ ಪುಷ್ಠಿನೀಡಿದಂತಿದೆ.
ಜ್ಯೋತಿಷಿಯ ‘ಭವಿಷ್ಯ’ದ ಚರ್ಚೆ..!
ಖ್ಯಾತ ಜ್ಯೋತಿಷಿ ಬಿಬಿ ಆರಾಧ್ಯ ಎಂಬವರು ನುಡಿದಿರುವ ಭವಿಷ್ಯವಾಣಿಯೂ ಚರ್ಚೆಯ ಮುನ್ನಲೆಗೆ ಬಂದಿರುವುದು ಅಚ್ಚರಿಯ ಬೆಳವಣಿಗೆ. “ಎರಡು ವರ್ಷಗಳ ನಂತರ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ. ಮುಂದಿನ 8 ವರ್ಷ ಕಾಲ ಡಿಕೆಶಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಲಿದ್ದಾರೆ” ಎಂದು ಈ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.
ಈ ಕುರಿತಂತೆ ಕಾಂಗ್ರೆಸ್ ನಾಯಕರಲ್ಲೂ ಲೆಕ್ಕಾಚಾರ ಆರಂಭವಾಗಿದ್ದು, ಈ ಭವಿಷ್ಯವಾಣಿ ಗಮನಿಸಿದರೆ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಈ ಜ್ಯೋತಿಷಿಯ ಸಲಹೆಯಂತೆಯೇ ವಿಧಾನಸೌಧದಲ್ಲಿ ನಿರ್ದಿಷ್ಟ ಸಂಖ್ಯೆಯ ಕೊಠಡಿಯನ್ನೂ ಹಂಚಿಕೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರು ಈಗ ಇರುವ ಸರ್ಕಾರಿ ನಿವಾಸವನ್ನು ಪಡೆಯುವಂತೆ ಜ್ಯೋತಿಷಿ ಸಲಹೆ ನೀಡಿದ್ದು, ಈ ವಿಚಾರದಲ್ಲೂ ಡಿಕೆಶಿ ಪ್ರಯತ್ನ ನಡೆಸುತ್ತಿದ್ದಾರೆನ್ನಲಾಗಿದೆ. ಈ ವಿದ್ಯಮಾನಗಳು ಎರಡು ವರ್ಷಗಳ ಬಳಿಕ ಡಿಕೆಶಿ ಯುಗಾರಂಭದ ಸಾಧ್ಯತೆಗಳತ್ತ ಬೊಟ್ಟುಮಾಡುತ್ತಿದೆ