ಆಶಾ ಕಾರ್ಯಕರ್ತೆಯರಿಗೆ ಪರಿಹಾರ, ವಿಮಾ ಸೌಲಭ್ಯ. ಸಚಿವೆ ಶಶಿಕಲಾ ಜೊಲ್ಲೆ ಭರವಸೆ..
ವಿಜಯಪುರ: ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂಧಿಸಲು ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ವಿಜಯಪುರದಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡ ಸಚಿವೆ ಶಶಿಕಲಾ ಜೊಲ್ಲೆ, ಕಳೆದ ಒಂದು ವಾರದಿಂದ ವರ್ಚೂವಲ್ ಮೀಟಿಂಗ್ ಮಾಡಿದ್ದೇನೆ.ಇಲ್ಲಿ ಸಭೆ ಕರೆದಿದ್ದೇನೆ ಎಂದರು. ಪ್ರತಿ ಪಂಚಾಯತಿ ಮಟ್ಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಸೂಕ್ತ ಸೌಲಭ್ಯ ನೀಡಲಾಗುತ್ತಿದೆ. ಮಾಸ್ಕ ಸೆನಿಟೈಸರ್ ಹಾಗೂ ಗ್ಲೌಸ್ ಎಲ್ಲವನ್ನು ನೀಡಲಾಗುತ್ತಿದೆ. ಎಲ್ಲ ಗ್ರಾಮ ಪಂಚಾಯತಿ ಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಎಲ್ಲಾದರೂ ಲೋಪ ದೋಷಗಳಾಗಿದ್ದರೆ ಪರಿಶೀಲಿಸುವೆ ಎಂದು ಅವರು ತಿಳಿಸಿದ್ದಾರೆ. ಎಲ್ಲಾದರೂ ಸಮಸ್ಯೆ ಇದ್ದರೆ ಗಮನಕ್ಕೆ ತನ್ನಿ ಕ್ರಮ ಕೈಗೊಳ್ಳಲಾಗುವದು ಎಂದು ಅವರು ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಎರಡು ತಿಂಗಳಿಂದ ಸಂಬಳ ಇಲ್ಲದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಸಚಿವೆ ಶಶಿಕಲಾ ಜೊಲ್ಲೆ, ಗುರುವಾರ ಕ್ಯಾಬಿನೆಟ್ ಇದೆ, ಅಲ್ಲಿ ಈ ವಿಚಾರ ಚರ್ಚಿಸುವೆ. ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಸಂಬಳ ಕೊಡಿಸುವ ಕೆಲಸ ಮಾಡುವೆ ಎಂದು ಆಶ್ವಾಸನೆ ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ಚಿಕಿತ್ಸೆ ವಿಚಾರದಲ್ಲಿನ ಕೊರತೆ ಕುರಿತು ಕೇಳಿಬಂದಿರುವ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಜಿಲ್ಲಾಸ್ಪತ್ರೆ ಯಲ್ಲಿ ಅವರು ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು. ಕಳೆದ ವರ್ಷ ಸೊಂಕು ತಗುಲಿ ಸಾವನಪ್ಪಿದವರಿಗೆ ಪರಿಹಾರ ನೀಡಲಾಗುವುದು. ಕೇಂದ್ರ ಸರ್ಕಾರದಿಂದ 50 ಲಕ್ಷ ಘೋಷಣೆ ಮಾಡಿತ್ತು, ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ 30 ಲಕ್ಷ ಘೋಷಣೆ ಮಾಡಿತ್ತು. ಈ ಬಾರಿ ಕೂಡಾ ನೀಡುವಂತೆ ಸಿಎಂ ಅವರಿಗೆ ಪತ್ರ ಬರೆಯುತ್ತಿದ್ದೇನೆ ಎಂದವರು ತಿಳಿಸಿದರು.
ಈ ಬಾರಿ ಕೂಡಾ ವಿಮೆ ಸೌಲಭ್ಯ ಸಿಗಬೇಕು ಎಂದು, ಆ ಪ್ರಯತ್ನ ಕೂಡಾ ಮಾಡುತ್ತಿರುವೆ ಎಂದ ಸಚಿವೆ ಶಶಿಕಲಾ ಜೊಲ್ಲೆ, ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸೌಲಭ್ಯ ಸಿಗಬೇಕಿದ್ದು, ಈ ಬಗ್ಗೆ ಆರೋಗ್ಯ ಸಚಿವರೊಂದಿಗೂ ಮಾತನಾಡುವೆ ಎಂದು ಭರವಸೆ ನೀಡಿದರು.