ಗೋಕಾಕ್: ಮುಡಾ ಹಗರಣ ಆರೋಪವು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದರೆ, ಮತ್ತೊಂದೆಡೆ ಈ ಹಗರಣ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ವಿಚಾರ ಬಿಜೆಪಿಯೊಳಗೆ ತಳಮಳಕ್ಕೆ ಕಾರಣವಾಗಿದೆ.
ಮುಡಾ ಸೈಟ್ ಹಗರಣ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಹಾಗೂ ಸಿಬಿಐ ತನಿಖೆಗೆ ಒತ್ತಾಯಿಸಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಈ ವಿಚಾರ ಸಂಬಂಧ ಬಜೆಪಿ ನಾಯಕರಲ್ಲೇ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬವಷ್ಟೇ ಅಲ್ಲ, ಹೆಚ್‌ಡಿಕೆ ಹಾಗೂ ಬಿಎಸ್‌ವೈ ಕುಟುಂಬವೂ ಆರೋಪಿ ಸ್ಥಾನದಲ್ಲಿರುವುದರಿಂದ ಪಾದಯಾತ್ರೆಗೆ ಅರ್ಥವಿಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಪಾದಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಮತ್ತೊಬ್ಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಮುಡಾ ಹಗರಣಕ್ಕಿಂತಲೂ ವಾಲ್ಮಿಕಿ ಹಗರಣ ಗಂಭಿರವಾದದ್ದು ಹಾಗಾಗಿ ಮೈಸೂರು ಪಾದ ಯಾತ್ರೆಗೆ ಪರ್ಯಾಯಾವಾಗಿ ವಾಲ್ಮಿಕಿ ಹಗರಣ ವಿರುದ್ದ ಬಳ್ಳಾರಿಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ಒದಗಿಸಿರುವ ರಮೇಶ್ ಜಾರಕಿಹೊಳಿ, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನಾವು ಇನ್ನೂ ಒಪ್ಪಿಲ್ಲ. ಒಪ್ಪೋದು ಇಲ್ಲ ಎಂದಿದ್ದಾರೆ. ನಮಗೇನಿದ್ದರೂ ಹೈಕಮಾಂಡ್ ಅಷ್ಟೇ ಮುಖ್ಯ ಎಂದಿರುವ ರಮೇಶ್ ಜಾರಕಿಹೊಳಿ, ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರು ನಡೆಸಿವ ಪಾದಯಾತ್ರಯಲ್ಲಿ ಭಾಗವಹಿಸುವ ಬಗ್ಗೆ ದೆಹಲಿ ಹೈಕಮಾಂಡ್ ಜೊತೆ ಮಾತನಾಡುವುದಾಗಿ ತಿಳಿಸಿದರು.
ಮುಡಾಗಿಂತಲೂ ವಾಲ್ಮಿಕಿ ಹಗರಣ ದೊಡ್ಡದಿದೆ. ಹಾಗಾಗಿ ನಾನು ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಇನ್ನು ಕೆಲವು ಶಾಸಕರು ಸೇರಿ ಕೂಡಲ ಸಂಗಮದಿಂದ ಪಾದಯಾತ್ರೆ ನಡೆಸಬೇಕೆಂದುಕೊಂಡಿದ್ದೇವೆ ಎಂದು ಜಾರಕಿಹೊಳಿ ತಿಳಿಸಿದರು.