ಮಂಗಳೂರು: ಮೋದಿ ಪಟ್ಟಾಭಿಷೇಕದ ವಿಜಯೋತ್ಸವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ ಘಟನೆ ಮಂಗಳೂರು ಸಮೀಪದ ಬೊಳಿಯಾರ್ ಬಳಿ ನಡೆದಿದೆ. ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಈ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಮತ್ತು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಜಯಗಳಿಸಿದ ಹಿನ್ನೆಲೆ ವಿಜಯೋತ್ಸವ ಮೆರವಣಿಗೆ ಆಯೋಜಿಸಲಾಗಿತ್ತು. ಬೋಳಿಯಾರು ಬಿಜೆಪಿ ಗ್ರಾಮಸಮಿತಿ ವತಿಯಿಂದ ಚೇಳೂರು, ಬೋಳಿಯಾರು ಮಾರ್ಗವಾಗಿ ಧರ್ಮನಗರವರೆಗೆ ವಿಜಯೋತ್ಸವ ಮೆರವಣಿಗೆ ಆಯೋಜಿಸಲಾಗಿತ್ತು.
ಮೆರವಣಿಗೆ ನಂತರ ಹರೀಶ ಮತ್ತು ನಂದನ್ ಎಂಬವರು ಅಂಗಡಿ ಬಳಿಗೆ ತೆರಳಿದ್ದರು. ಅಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಬೇರೆ ಯುವಕರ ಜೊತೆ ಮಾತಿನ ಚಕಮಕಿ ನಡೆದಿದೆ. ಆ ವೇಳೆ ಈ ಯುವಕರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಬೋಳಿಯಾರು ಕ್ರಾಸ್ ಸಮೀಪ ಈ ಘಟನೆ ನಡೆದಿದ್ದು ಚೂರಿ ಇರಿತದಿಂದಾಗಿ ಹರೀಶ್ ಅವರ ಹೊಟ್ಟೆ ಮತ್ತು ನಂದನ್ ಅವರ ಬೆನ್ನಿನಲ್ಲಿ ಗಾಯಗಳಾಗಿವೆ ಎನ್ನಲಾಗಿದೆ. ಸುದ್ದಿ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದರು. ಹಲ್ಲೆಕೋರರ ಮಾಹಿತಿ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
ಇದೀಗ ಘಟನಾ ಸ್ತಳದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೇಬಸ್ತ್ ಕೈಗೊಂಡಿದ್ದಾರೆ.
ಈ ನಡುವೆ, ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ ಹಿಂದೂ ಸಂಘಟನೆಗಳ ಮುಖಂಡರು ಯೋಗಕ್ಷೇಮ ವಿಚಾರಿಸಿದರು. ಘಟನಯನ್ನು ಖಂಡಿಸಿರುವ ಅರುಣ್ ಪುತ್ತಿಲ ಸೇರಿದಂತೆ ಹಿಂದೂ ಸಂಘಟನೆಗಳ ನಾಯಕರು, ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕೆಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.