ಹಾಸನ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ದೋಸ್ತಿ ಮಾಡಿಕೊಂಡಿದ್ದು ಸೀಟು ಹಂಚಿಕೆ ವಿಚಾರ ತೀವ್ರ ಕುತೂಹಲ ಕೆರಳಿಸಿದೆ. ಜೆಡಿಎಸ್ ಪಕ್ಷಕ್ಕೆ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಟ್ಟಿದೆ.
ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಜೊತೆ ಮಾಹಿತಿ ಹಂಚಿಕೊಂಡ ಜೆಡಿಎಸ್ ರಾಜ್ಯಾದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಾಲಿಗೆ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರ ಸಿಕ್ಕಿದೆ ಎಂದು ಬಹಿರಂಗಪಡಿಸಿದರು.
ಜೆಡಿಎಸ್ ಪಕ್ಷ ಉಳಿಸಿ ಎಂದು ಕಾರ್ಯಕರ್ತರ ಮುಂದೆ ಭಾವುಕರಾಗಿ ನುಡಿದ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂದರು.
ಸುಮಲಾತಾ, ಮುನಿಸ್ವಾಮಿ ನಡೆ ಬಗ್ಗೆ ಕುತೂಹಲ..
ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿರುವುದರಿಂದ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸುಮಲತಾ ಅಂಬರೀಶ್ ಅವರಿಗೆ ತೀವ್ರ ನಿರಾಸೆಯಾಗಿದೆ. ಇವರ ಮುಂದಿನ ನಡೆ ಬಗ್ಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳುವಂತಾಗಿದೆ.