ಬೆಂಗಳೂರು: ನ್ಯಾಕ್ (NAAC) ವತಿಯಿಂದ A+ ಮಾನ್ಯತೆ ಪಡೆದಿರುವ ಅಲೈಯನ್ಸ್ ವಿಶ್ವವಿದ್ಯಾಲಯದ 14ನೇ ಪದವಿ ಪ್ರದಾನ ಸಮಾರಂಭ ಡಿಸೆಂಬರ್ 20, 2025ರ ಶನಿವಾರ ಬೆಂಗಳೂರಿನ ಕೇಂದ್ರ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ.
ವ್ಯವಹಾರ ನಿರ್ವಹಣೆ, ಕಾನೂನು, ಎಂಜಿನಿಯರಿಂಗ್ ಹಾಗೂ ಲಿಬರಲ್ ಆರ್ಟ್ಸ್ ಸೇರಿದಂತೆ ವಿವಿಧ ಶಾಖೆಗಳ ಒಟ್ಟು 1,962 ಪದವಿ ಮತ್ತು ಡಿಪ್ಲೊಮಾಗಳನ್ನು ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 960 ಪದವಿ ವಿದ್ಯಾರ್ಥಿಗಳು, 887 ಸ್ನಾತಕೋತ್ತರ ವಿದ್ಯಾರ್ಥಿಗಳು, 10 ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳು, ಪ್ರದರ್ಶನ ಕಲೆಗಳ 20 ಡಿಪ್ಲೊಮಾ ವಿದ್ಯಾರ್ಥಿಗಳು ಹಾಗೂ ನಿರ್ವಹಣಾ ವಿಭಾಗದ 85 ಎಕ್ಸಿಕ್ಯೂಟಿವ್ ಸ್ನಾತಕೋತ್ತರ ಡಿಪ್ಲೊಮಾ ವಿದ್ಯಾರ್ಥಿಗಳು ಸೇರಿದ್ದಾರೆ. ಇದು ವಿಶ್ವವಿದ್ಯಾಲಯದ ಬಹುಶಾಖೀಯ ಶೈಕ್ಷಣಿಕ ಪರಿಸರವನ್ನು ಪ್ರತಿಬಿಂಬಿಸುತ್ತದೆ.
ಪದವಿ ಪ್ರದಾನ ಮೆರವಣಿಗೆಯೊಂದಿಗೆ ಸಮಾರಂಭ ಆರಂಭವಾಗಲಿದ್ದು, ಚಾನ್ಸಲರ್ ಅವರ ಅಧಿಕೃತ ಘೋಷಣೆಯ ನಂತರ ವಾರ್ಷಿಕ ವರದಿ ಮಂಡನೆ, ಪದವಿ ಮತ್ತು ಡಿಪ್ಲೊಮಾಗಳ ಪ್ರದಾನ, ಡಾಕ್ಟರೇಟ್ ಪದವಿ ಹಾಗೂ ಪದಕಗಳ ವಿತರಣೆ ನಡೆಯಲಿದೆ. ಮುಖ್ಯ ಅತಿಥಿ ಹಾಗೂ ಗೌರವಾನ್ವಿತ ಅತಿಥಿಗಳ ಭಾಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿವೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅನನ್ಯ ಬ್ಯಾನರ್ಜಿ ಅವರು ಸಮಾರಂಭದ ಮುಖ್ಯ ಅತಿಥಿಯಾಗಿರಲಿದ್ದಾರೆ. ನ್ಯಾಯಾಂಗ ನಿಷ್ಠೆ, ಸಂವಿಧಾನಾತ್ಮಕ ಪಾಂಡಿತ್ಯ ಹಾಗೂ ಲಿಂಗ ಸಮಾನತೆಗೆ ಸಲ್ಲಿಸಿದ ಬದ್ಧತೆಯಿಂದ ಅವರು ಗಮನಸೆಳೆದಿದ್ದಾರೆ.
ಭಾರತೀಯ ನಿರ್ವಹಣಾ ಸಂಸ್ಥೆ ಬೆಂಗಳೂರು (IIMB) ಯ ತಂತ್ರಜ್ಞಾನ ಪ್ರಾಧ್ಯಾಪಕರಾಗಿರುವ ಹಾಗೂ IIM ಬೆಂಗಳೂರು ನೂತನ ಕ್ಯಾಂಪಸ್‌ನ ಪ್ರೊಫೆಸರ್–ಇನ್–ಚಾರ್ಜ್ ಆಗಿರುವ ಪ್ರೊ. ರಿಷಿಕೇಶ ಟಿ. ಕೃಷ್ಣನ್ ಭಾಗವಹಿಸಲಿದ್ದಾರೆ. ಅವರು IIM ಇಂದೋರ್ ಮತ್ತು IIM ಬೆಂಗಳೂರು ಸಂಸ್ಥೆಗಳ ಮಾಜಿ ನಿರ್ದೇಶಕರಾಗಿದ್ದು, ನವೋತ್ಪಾದನೆ ಮತ್ತು ತಂತ್ರಯೋಜನೆ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದಾರೆ.
SEMI ಇಂಡಿಯಾ ಮತ್ತು ELCITA ಸಂಸ್ಥೆಗಳ ಅಧ್ಯಕ್ಷರಾಗಿರುವ ಹಾಗೂ ಟೆಸಾಲ್ವ್ ಸೆಮಿಕಂಡಕ್ಟರ್‌ನ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ವೀರಪ್ಪನ್ ವಿ. ಅವರು ಕೂಡ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಅವರು, ಬೆಂಗಳೂರು ನಗರವನ್ನು ನವೋತ್ಪಾದನಾ ಕೇಂದ್ರವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.




















































