ಬೆಂಗಳೂರು: ವಾಲ್ಮಿಕಿ ನಿಗಮದ ಬಹುಕೋಟಿ ಹಗರಣದಲ್ಲಿ ಸಿಎಂ ಪಾತ್ರವಿದೆಯೇ? ಅಥವಾ ಸಿದ್ದರಾಮಯ್ಯ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆಯೇ? ಈ ಕುರಿತಂತೆ ರಾಜಕೀಯದಲ್ಲಿ ನಾಯಕರ ನಡುವೆ ಭಾರೀ ಜಟಾಪಟಿ ಸಾಗಿದೆ. ಅದಾಗಲೇ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂಬ ಸುದ್ದಿ ಈ ಚರ್ಚೆಗಳಿಗೆ ಪುಷ್ಟಿ ನೀಡಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂಪಾಯಿ ಹಗರಣ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳ ಪಾತ್ರ ಬಗ್ಗೆ ಆರೋಪಿಸುವಂತೆ ಅಧಿಕಾರಿಯೊಬ್ಬರಿಗೆ ಒತ್ತಡ ಹೇರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದೂರು ನೀಡಿದ್ದಾರೆ ಎನ್ಬಲಾಗಿದೆ.