ಬೆಂಗಳೂರು: ಅಶ್ಲೀಲ ವೀಡಿಯೋ ಕೋಲಾಹಲದ ನಡುವೆ ಅತ್ಯಾಚಾರ ಆರೋಪದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣನ ಬಂಧನಕ್ಕಾಗಿ ವಿಶೇಷ ತನಿಖಾ ತಂಡ ಖೆಡ್ಡಾ ತೋಡಿದೆ. ಪ್ರಮುಖವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಹದ್ದಿನ ಕಣ್ಣಿಟ್ಟಿದೆ.
ಅಶ್ಲೀಲ ವೀಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಹಾಸನದ ಜೆಡಿಎಸ್ ಅಭ್ಯರ್ಥಿಯೂ ಆದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಪಲಾಯನವಾಗಿದ್ದಾರೆಂಬ ಸುದ್ದಿ ಹರಿದಾಡಿದೆ. ಅದಾಗಲೇ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ರೇವಣ್ಣ ವಿರುದ್ದ ಸಂತ್ರಸ್ತ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗುತ್ತಿದ್ದಂತೆಯೇ ಪ್ರಕರಣ ಹೈ ವೋಲ್ಟೇಜ್ ಬೆಳವಣಿಗೆಗಳಿಗೆ ಕಾರಣವಾಗಿದೆ. ವಿಚಾರಣೆಗೆ ಹಾಜರಾಗುವಂತೆ ಮಾಜಿ ಮಂತ್ರಿ ಹೆಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಪೊಲೀಸರು ನೊಟೀಸ್ ನೀಡುತ್ತಿದ್ದಂತೆಯೇ ಎಚ್ಚೆತ್ತ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದುಕೊಂಡೇ ಕಾನೂನು ಸಮರಕ್ಕೆ ಮುನ್ನುಡಿ ಬರೆದರು. ವಿಚಾರಣೆಗೆ ಹಾಜರಾಗುವ ಸಂಬಂಧ ತಮ್ಮ ವಕೀಲರ ಮೂಲಕ 7 ದಿನಗಳ ಕಾಲಾವಕಾಶ ಕೋರಿದರಾದರೂ ಇದಕ್ಕೆ ಎಸ್‌ಐಟಿ ಒಪ್ಪಿಲ್ಲ.
ಇದೀಗ ತಂದೆ ಹೆಚ್.ಡಿ.ರೇವಣ್ಣ ಬಂಧನವಾಗಿದ್ದು, ಮಗ ಪ್ರಜ್ವಲ್ ರೇವಣ್ಣ ಅವರನ್ನೂ ಬಂಧಿಸಲು ಪೊಲೀಸರು ಚಕ್ರವ್ಯೂಹ ರೂಪಿಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ವಿದೇಶದಿಂದ ಭಾನುವಾರವೇ ವಾಪಾಸಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಪೊಲೀಸರು ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಹಾಕಿದ್ದಾರೆ.
ಮಂಗಳೂರಿನಲ್ಲಿ ಹದ್ದಿನ ಕಣ್ಣು..!
ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಭಾನುವಾರ ಸ್ವದೇಶಕ್ಕೆ ಮರಳುವ ಸಾಧ್ಯತೆಗಳ ಬಗ್ಗೆ ಮಾಹಿತಿ ಕಲೆಹಾಕಿರುವ ಎಸ್‌ಐಟಿ ಪೊಲೀಸರು ಎಲ್ಲೆಡೆ ಹೈ ಅಲರ್ಟ್ ಆಗಿದ್ದಾರೆ. ಸ್ವ ಕ್ಷೇತ್ರ ಹಾಸನಕ್ಕೆ ಸಮೀಪವಿರುವ ಬೆಂಗಳೂರು ಅಥವಾ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಪ್ರಜ್ವಲ್ ಆಗಮಿಸುವ ಸಾಧ್ಯತೆಗಳಿವೆ ಎಂದು ಮನಗಂಡಿರುವ ಪೊಲೀಸರು ಈ ಎರಡು ಕಡೆ ಹೆಚ್ಚಿನ ಕಣ್ಗಾವಲು ಹಾಕಿದ್ದಾರೆ. ಅದರಲ್ಲೂ ಪೊಲೀಸ್ ಬಂಧನದಿಂದ ತಪ್ಪಿಸಿಕೊಳ್ಳಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಪ್ರಜ್ವಲ್ ಆಗಮಿಸುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ.
ಈ ನಡುವೆ. ಪ್ರಜ್ವಲ್ ಬಂಧನಕ್ಕೆ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಹಾಗಾಗಿ ದೇಶದ ಯಾವುದೇ ಏರ್ಪೋರ್ಟ್ಗೆ ಬಂದರೂ ಅಲ್ಲೇ ಬಂಧನ ಪ್ರಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೆಂಗಳೂರು, ಮಂಗಳೂರು ಮಾತ್ರವಲ್ಲದೆ, ಕೊಚ್ಚಿ, ಗೋವಾ, ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸಿದರೂ ಬಂಧಿಸಲು ಪೊಲೀಸರು ತಯಾರಿ ನಡೆಸಿದ್ದಾರೆ.