ಮಂಗಳೂರು: ಅತ್ಯಾಚಾರ ಆರೋಪದ ಸುಳಿಯಲ್ಲಿ ಸಿಲುಕಿರುವ ಜೆಡಿಎಸ್ ಸಂಸದ ಪ್ರಜ್ವಲ್ ಬಂಧನಕ್ಕಾಗಿ ವಿಶೇಷ ತನಿಖಾ ತಂಡದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗೆ ಇಳಿದಿದ್ದಾರೆ. ಅದರಲ್ಲೂ ಬಂದರು ನಗರಿ ಮಂಗಳೂರಿನಲ್ಲಿ ಪ್ರಜ್ವಲ್‌ಗಾಗಿ ಪೊಲೀಸರು ಖೆಡ್ಡಾ ತೋಡಿರುವ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಭಾನುವಾರ ಸ್ವದೇಶಕ್ಕೆ ಮರಳುವ ಸಾಧ್ಯತೆಗಳ ಬಗ್ಗೆ ಮಾಹಿತಿ ಕಲೆಹಾಕಿರುವ ಎಸ್‌ಐಟಿ ಪೊಲೀಸರು ಎಲ್ಲೆಡೆ ಹೈ ಅಲರ್ಟ್ ಆಗಿದ್ದಾರೆ. ಸ್ವ ಕ್ಷೇತ್ರ ಹಾಸನಕ್ಕೆ ಸಮೀಪವಿರುವ ಬೆಂಗಳೂರು ಅಥವಾ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಪ್ರಜ್ವಲ್ ಆಗಮಿಸುವ ಸಾಧ್ಯತೆಗಳಿವೆ ಎಂದು ಮನಗಂಡಿರುವ ಪೊಲೀಸರು ಈ ಎರಡು ಕಡೆ ಹೆಚ್ಚಿನ ಕಣ್ಗಾವಲು ಹಾಕಿದ್ದಾರೆ.
ಇದನ್ನೂ ಓದಿ.. ‘ಅಪ್ಪ ರೇವಣ್ಣ’ ಬಂಧನ ಬೆನ್ನಲ್ಲೇ ‘ಪುತ್ರ ಪ್ರಜ್ವಲ್’ ಸೆರೆಗೆ SIT ಖೆಡ್ಡಾ..! ಕಾರ್ಯಾಚರಣೆಗೆ ಪೊಲೀಸ್ ಪ್ಲಾನ್ ಹೀಗಿದೆ..!
ಪೊಲೀಸ್ ಬಂಧನದಿಂದ ತಪ್ಪಿಸಿಕೊಳ್ಳಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಪ್ರಜ್ವಲ್ ಆಗಮಿಸುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ.
ಒಂದು ವೇಳೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದರೂ ಮಂಗಳೂರು ಮೂಲಕ ಹಾಸನಕ್ಕೆ ತರಳುವ ಸಾಧ್ಯತೆಗಳಿವೆ. ಈ ಕಾರಣದಿಂದಾಗಿ ಮಂಗಳೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.
ಈ ನಡುವೆ. ಪ್ರಜ್ವಲ್ ಬಂಧನಕ್ಕೆ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಹಾಗಾಗಿ ದೇಶದ ಯಾವುದೇ ಏರ್ಪೋರ್ಟ್ಗೆ ಬಂದರೂ ಅಲ್ಲೇ ಬಂಧನ ಪ್ರಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೆಂಗಳೂರು, ಮಂಗಳೂರು ಮಾತ್ರವಲ್ಲದೆ, ಕೊಚ್ಚಿ, ಗೋವಾ, ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸಿದರೂ ಬಂಧಿಸಲು ಪೊಲೀಸರು ತಯಾರಿ ನಡೆಸಿದ್ದಾರೆ.