ಹಾಸನ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಹಾಸನ ಸಮೀಪ ಕಂದಲಿ ಬಳಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರುಮಂದಿ ಸಾವನ್ನಪ್ಪಿದ್ದಾರೆ.
ಟೊಯೋಟಾ ಇಟಿಯೋಸ್ ಕಾರು ಲಾರಿಗೆ ಡಿಕ್ಕಿಯಾಗಿ ಈ ಭೀಕರ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಕಾರು ಲಾರಿಗೆ ಅಪ್ಪಳಿಸಿ, ನುಜ್ಜುಗುಜ್ಜಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಿ, ಕಾರಿನಲ್ಲಿ ಬೆಂಗಳೂರಿನತ್ತ ಈ ಕುಟುಂಬ ಸದಸ್ಯರು ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಕಾರು ರಸ್ತೆಯ ಡಿವೈಡರ್‌ಗೆ ಅಪ್ಪಳಿಸಿ ಪಕ್ಕದ ಲೇನ್‌ಗೆ ಬಿದ್ದಿದ್ದು, ಅದಾಗಲೇ ಬಂದ ಕಂಟೇನರ್‌ಗೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಮೂವರು ಪುರುಷರು, ಒಂದು ಮಗು ದುರ್ಮರಣಕ್ಕೀಡಾಗಿದ್ದು, ಮೃತರನ್ನು ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್, ರಾಕೇಶ್ ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರೆನ್ನಲಾಗಿದ್ದ, ಬೆಂಗಳೂರಿನ ಹೊಸಕೋಟೆ ಸಮೀಪದ ಅಂದರಹಳ್ಳಿ ಹಾಗೂ ಕಾರಹಳ್ಳಿ ಗ್ರಾಮದವರು ಎನ್ನಲಾಗಿದೆ.