ನವದೆಹಲಿ: ಲೋಕಸಭೆ ಚುನಾವಣೆಗ ಘೋಷಣೆಗೆ ದಿನಗಣನೆ ಆರಂಭವಾಗಿರುವಂತೆಯೇ ದೇಶದ ಆಡಳಿತ ವ್ಯವಸ್ಥೆಯಲ್ಲಿ ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಅಚ್ಚರಿಯ ನಿರ್ಧಾರವೊಂದರಲ್ಲಿ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ರಾಜೀನಾಮೆ ನೀಡಿದ್ದಾರೆ. ತರಾತುರಿಯ ಈ ವಿದ್ಯಮಾನದ ನಡುವೆಯೇ ರಾಷ್ಟ್ರಪತಿಯವರೂ ಈ ರಾಜೀನಾಮೆಯನ್ನು ಅಂಗೀಕರಿಸಿದ್ದು ಒಟ್ಟಾರೆ ಬೆಳವಣಿಗೆ ರೋಚಕತೆಯಿಂದ ಕೂಡಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವಾರ ಲೋಕಸಭೆಗೆ ಚುನಾವಣೆ ಘೋಷಣೆಯಾಗಬಹುದು. ಆದರೆ, ಅದಕ್ಕೆ ಮುನ್ನವೇ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭೆ ಚುನಾವಣೆಗೆ ತಯಾರಿ ನಡೆದಿರುವಾಗಲೇ ಈ ರಾಜೀನಾಮೆ ಬೆಳವಣಿಗೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಅರುಣ್ ಗೋಯಲ್ ಅವರು ಅಧಿಕಾರಾವಧಿ ಇನ್ನೂ ಹಲವು ವರ್ಷಗಳು ಬಾಕಿ ಇರುವಾಗಲೇ ಅವರು ಹುದ್ದೆ ತ್ಯಜಿಸಿದ್ದಾರೆ. ಇದರಿಂದಾಗಿ ಕೇಂಯ ಚುನಾವಣಾ ಆಯೋಗದಲ್ಲಿ 2 ಹುದ್ದೆಗಳು ತೆರವಾದಂತಾಗಿದೆ. ಇದೀಗ ಚುನಾವಣಾ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಹೆಗಲೇರಿದೆ.

























































