ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ ಮಾಡುವ ಬಗ್ಗೆ ಮಧ್ಯಂತರ ಬಜೆಟ್’ನಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವುದನ್ನು ಕರ್ನಾಟಕದ ಆಶಾ ಕಾರ್ಯಕರ್ತೆಯರು ಸ್ವಾಗತಿಸಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರ ಪರವಾಗಿ ಆಶಾವಾದದ ನಿರೀಕ್ಷೆಯನ್ನು ಮೋದಿ ಸರ್ಕಾರ ಹುಸಿಗೊಳಿಸಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತಂತೆ ಉದಯ ನ್ಯೂಸ್’ಗೆ ಪ್ರತಿಕ್ರಿಯಿಸಿರುವ ನಾಗಲಕ್ಷ್ಮಿ, ಆಶಾಕಾರ್ಯಕರ್ತೆಯರೆಲ್ಲರೂ ಬಿಪಿಎಲ್ ಕಾರ್ಡ್ ಹೊಂದಿರುವ ಹಾಗೂ ಕಾಡು ಬಡವರೇ ಆಗಿದ್ದಾರೆ. ಅವರೆಲ್ಲರಿಗೂ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸುವುದರಲ್ಲಿ ವಿಶೇಷತೆ ಏನೂ ಇಲ್ಲ. ಅದಕ್ಕಿಂತಲೂ ಬದುಕನ್ನೇ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಮುಡುಪಾಗಿಟ್ಟಿರುವ ಆಶಾ ಕಾರ್ಯಕರ್ತೆಯರ ಗೌರವ ವೇತನ ಹೆಚ್ಚಿಸದಿರುವುದು ಕೇಂದ್ರ ಸರ್ಕಾರದ ನಿರ್ಲಕ್ಷ್ಯವಲ್ಲದೆ ಬೇರೇನೂ ಅಲ್ಲ ಎಂದಿದ್ದಾರೆ.
ಆಶಾ ಕಾರ್ಯಕರ್ತೆಯರ ಗೌರವ ಧನವನ್ನು ಕನಿಷ್ಠ 4,500 ರೂಪಾಯಿ ಹೆಚ್ಚಳ ಮಾಡುವುದು ಕೇಂದ್ರಕ್ಕೆ ಕಷ್ಟದ ಕೆಲಸವಲ್ಲ. ಆದರೂ ಈ ಬಗ್ಗೆ ಸರ್ಕಾರ ಒಲವು ತೋರಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ನಾಗಲಕ್ಷ್ಮೀ, ಈ ವಿಚಾರದಲ್ಲಿ ಆಶಾ ಕಾರ್ಯಕರ್ತೆಯರು ಹೋರಾಟವನ್ನು ನಡೆಸುತ್ತಲೇ ಇರಬೇಕೆಂಬುದು ಕೇಂದ್ರ ಸರ್ಕಾರದ ನಿರೀಕ್ಷೆ ಎಂಬುದು ಗೊತ್ತಾಗುತ್ತದೆ. ನಾವು ಕೂಡಾ ಹೋರಾಟವನ್ನು ನಿಲ್ಲಿಸಲ್ಲ ಎಂದು ಹೇಳಿದ್ದಾರೆ.
10 ವರ್ಷಗಳಿಂದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿರುವ ನರೇಂದ್ರ ಮೋದಿಯವರು ತಮ್ಮ ೧೦ ವರ್ಷಗಳ ಜರ್ನಿಯಲ್ಲಿ ಆಶಾ ಕಾರ್ಯಕರ್ತೆಯರ ಅಭಿವೃದ್ಧಿಗೆ ನಿರೀಕ್ಷಿತ ಕ್ರಮ ಕೈಗೊಂಡಿಲ್ಲ. ಈ ಅವಧಿಯ ಕೊನೆಯ ಬಜೆಟ್’ನಲ್ಲಾದರೂ ನಮ್ಮ ಬಹುಕಾಲದ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸವನ್ನು ಹೊಂದಿದ್ದೆವು. ಆದರೆ ಆಶಾಗಳ ಈ ನಿರೀಕ್ಷೆ ಹುಸಿಯಾಗಿದೆ ಎಂದು ನಾಗಲಕ್ಷ್ಮಿ ಹೇಳಿದ್ದಾರೆ.