ತಿರುವನಂತಪುರ: ಮಂಗಳೂರು ರೈಲ್ವೆ ಪ್ರದೇಶವನ್ನು ಅಕ್ಟೋಬರ್ 1ರಿಂದ ನೈಋತ್ಯ ರೈಲ್ವೆ (SWR) ವಲಯದ ಮೈಸೂರು ವಿಭಾಗದ ವ್ಯಾಪ್ತಿಗೆ ತರಲು ರೈಲ್ವೆ ಮಂಡಳಿ ಕೈಗೊಂಡಿರುವ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಮಂಗಳೂರು ಪ್ರದೇಶದ ರೈಲು ಮಾರ್ಗಗಳು ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ (SR) ವಲಯಗಳ ವ್ಯಾಪ್ತಿಯಲ್ಲಿ ಬರುತ್ತಿವೆ. ಮಂಗಳೂರು ಜಂಕ್ಷನ್ ಸೇರಿದಂತೆ ಪ್ರಮುಖ ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು ಎಂದು ಸತೀಶನ್ ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ‘ಎಕ್ಸ್’ನಲ್ಲಿ ರೈಲ್ವೆ ಮಂಡಳಿಯ ಪತ್ರವನ್ನು ಹಂಚಿಕೊಂಡು, ಅಕ್ಟೋಬರ್ 1ರಿಂದ ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗದ ಅಡಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಪತ್ರವನ್ನು SWR ಮತ್ತು SR ವಲಯಗಳ ಪ್ರಧಾನ ವ್ಯವಸ್ಥಾಪಕರು ಹಾಗೂ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ನ (KRCL) ಸಿಎಂಡಿಗೆ ಕಳುಹಿಸಲಾಗಿದೆ.

ರೈಲ್ವೆ ಮಂಡಳಿಯ ನಿರ್ಧಾರ ಕೈಗೊಳ್ಳುವ ಮೊದಲು ಕೇರಳ ಸರ್ಕಾರದೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ರಾಜ್ಯಕ್ಕೆ ಮಾಹಿತಿ ನೀಡದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸತೀಶನ್ ಆರೋಪಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆಯಲಾಗುವುದು. ಕೇಂದ್ರ ಸರ್ಕಾರದೊಂದಿಗೆ ತಕ್ಷಣ ಮಾತುಕತೆ ನಡೆಸಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ.
“ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬುದು ಕೇರಳದ ಒಗ್ಗಟ್ಟಿನ ಬೇಡಿಕೆ. ರಾಜ್ಯದ ಎಲ್ಲ ಸಂಸದರ ಸಹಕಾರದೊಂದಿಗೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು” ಎಂದು ಸತೀಶನ್ ತಿಳಿಸಿದ್ದಾರೆ.
ಮಂಗಳೂರು ಜಂಕ್ಷನ್ ಪಾಲಕ್ಕಾಡ್ ವಿಭಾಗದ ಪ್ರಮುಖ ಹಾಗೂ ಹೆಚ್ಚಿನ ಆದಾಯ ತರುವ ರೈಲು ನಿಲ್ದಾಣವಾಗಿದೆ. ಇದನ್ನು ವಿಭಾಗದಿಂದ ಬೇರ್ಪಡಿಸುವುದರಿಂದ ಪಾಲಕ್ಕಾಡ್ ವಿಭಾಗದ ಆದಾಯ ಗಣನೀಯವಾಗಿ ಕುಸಿಯಲಿದ್ದು, ಭವಿಷ್ಯದ ಅಭಿವೃದ್ಧಿ ಯೋಜನೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸತೀಶನ್ ಹೇಳಿದ್ದಾರೆ.
ಇದೇ ವೇಳೆ, ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿರುವ ಉಳ್ಳಾಲ–ಮಂಗಳೂರು ಮಾರ್ಗವನ್ನೂ ನೈಋತ್ಯ ರೈಲ್ವೆ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದೆ. ಇದರಿಂದ ದಕ್ಷಿಣ ರೈಲ್ವೆ ಹಾಗೂ ಕೇರಳ ಎರಡಕ್ಕೂ ಆರ್ಥಿಕ ನಷ್ಟವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.







































































