ಲಖಿಸರಾಯಿ: ಬಿಹಾರದ ಲಖಿಸರಾಯಿ ಜಿಲ್ಲೆಯ ಪ್ರಸಿದ್ಧ ಅಶೋಕ್‌ಧಾಮ್ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಏಳು ಭಕ್ತರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಶ್ರಾವಣ ಮಾಸದ ಮೂರನೇ ಸೋಮವಾರದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬೆಳಗ್ಗೆ ಸುಮಾರು 6.45ರ ವೇಳೆಗೆ ಜನಸಂದಣಿ ಹೆಚ್ಚಾಗಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದ್ದು, ಇದರಿಂದ ಭಕ್ತರಲ್ಲಿ ಆತಂಕ ಉಂಟಾಗಿ ಏಕಾಏಕಿ ಓಡಲು ಆರಂಭಿಸಿದ ಪರಿಣಾಮ ನೂಕುನುಗ್ಗಲು ಉಂಟಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ದೇವಸ್ಥಾನದ ಪ್ರವೇಶದ್ವಾರದ ಬಳಿ ಸುಮಾರು 100 ಮಂದಿ ಬ್ಯಾರಿಕೇಡ್ ದಾಟಲು ಮುಂದಾದಾಗ ನೂಕುನುಗ್ಗಲು ಉಂಟಾಗಿದೆ. ಕಿರಿದಾದ ಇಳಿಜಾರು ಮಾರ್ಗದಲ್ಲಿ ಭಕ್ತರು ಪರಸ್ಪರ ತಳ್ಳಿಕೊಂಡ ಪರಿಣಾಮ ಬ್ಯಾರಿಕೇಡ್ ಕುಸಿದು ಹಲವರು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಗಾಯಾಳುಗಳನ್ನು ತಕ್ಷಣ ಲಖಿಸರಾಯಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಆಡಳಿತ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿವೆ.
ವಿದ್ಯುತ್ ತಂತಿ ಬಿದ್ದಿದ್ದರಿಂದ ಉಂಟಾದ ಭೀತಿ ಹಾಗೂ ಭಾರೀ ಜನಸಂದಣಿ ಘಟನೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದ್ದು, ನಿಖರ ಕಾರಣ ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.







































































