ನವದೆಹಲಿ: ಮಧುಮೇಹ ತಡೆಗಟ್ಟುವಿಕೆ ಹಾಗೂ ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ರಾಷ್ಟ್ರೀಯ ಆದ್ಯತೆಯನ್ನಾಗಿ ಮಾಡಬೇಕು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಕರೆ ನೀಡಿದ್ದಾರೆ. ಗ್ರಾಮೀಣ ಸಮುದಾಯಗಳಲ್ಲೂ ಮಧುಮೇಹದ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಆರ್‌ಎಸ್‌ಎಸ್‌ಡಿಐ ಮಧುಮೇಹ ಗ್ರಾಮೀಣ ಔಟ್‌ರೀಚ್ ಡಿಜಿಟಲ್ ಪೋರ್ಟಲ್ ಹಾಗೂ ವಿಶ್ವಾಸ್ ಮಧುಮೇಹ ಜಾಗೃತಿ ವೀಡಿಯೊ ಲೈಬ್ರರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧುಮೇಹದ ಹೆಚ್ಚುತ್ತಿರುವ ಹೊರೆಯನ್ನು ಎದುರಿಸಲು ಸಮುದಾಯ ಆಧಾರಿತ, ತಂತ್ರಜ್ಞಾನ ಸಕ್ರಿಯ ಮತ್ತು ದತ್ತಾಂಶ ಆಧಾರಿತ ವಿಧಾನ ಅಗತ್ಯವಿದೆ ಎಂದರು.
ಭಾರತದ ಶೇ.70ಕ್ಕೂ ಹೆಚ್ಚು ಜನಸಂಖ್ಯೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಯುವಜನರ ಆರೋಗ್ಯ ನಿರ್ಣಾಯಕವಾಗಿದೆ ಎಂದು ಸಿಂಗ್ ಹೇಳಿದರು.

ಗ್ರಾಮೀಣ ಭಾರತವೂ ಮಧುಮೇಹದ ಅಪಾಯದಿಂದ ಹೊರತಾಗಿಲ್ಲ. ಆರಂಭಿಕ ಪತ್ತೆ, ಸಮಯೋಚಿತ ಚಿಕಿತ್ಸೆ, ಜೀವನಶೈಲಿ ಬದಲಾವಣೆ ಹಾಗೂ ನಿಯಮಿತ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಬೇಕು ಎಂದರು.
ಆರ್‌ಎಸ್‌ಎಸ್‌ಡಿಐ ಗ್ರಾಮೀಣ ಔಟ್‌ರೀಚ್ ಕಾರ್ಯಕ್ರಮ ಈಗಾಗಲೇ ಹಲವು ರಾಜ್ಯಗಳ ಸುಮಾರು 30 ಗ್ರಾಮಗಳನ್ನು ತಲುಪಿದ್ದು, ಮತ್ತಷ್ಟು ವಿಸ್ತರಿಸುವ ಯೋಜನೆ ಇದೆ. ಹೊಸ ಡಿಜಿಟಲ್ ಪೋರ್ಟಲ್ ಮೂಲಕ ನೋಂದಣಿ, ಚಿಕಿತ್ಸಾ ದಾಖಲೀಕರಣ ಮತ್ತು ದೀರ್ಘಕಾಲೀನ ಮೇಲ್ವಿಚಾರಣೆ ಸಾಧ್ಯವಾಗಲಿದೆ. ಇದರ ಮೂಲಕ ಸಾರ್ವಜನಿಕ ಆರೋಗ್ಯ ನೀತಿ ಹಾಗೂ ಸಂಶೋಧನೆಗೆ ನೆರವಾಗುವ ಅನಾಮಧೇಯ ದತ್ತಾಂಶವೂ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಡಿಜಿಟಲ್ ಆರೋಗ್ಯ ವೇದಿಕೆಗಳು ಸ್ಥಳೀಯ ಹಾಗೂ ಆಡುಮಾತಿನ ಭಾಷೆಗಳಲ್ಲಿಯೂ ಲಭ್ಯವಾಗಬೇಕು. ಮಧುಮೇಹ ತಡೆಗಟ್ಟುವಿಕೆ ವೈದ್ಯರ ಜವಾಬ್ದಾರಿಗೆ ಮಾತ್ರ ಸೀಮಿತವಾಗದೆ, ವ್ಯಕ್ತಿಗಳು, ಸಮುದಾಯಗಳು ಮತ್ತು ಸಂಸ್ಥೆಗಳ ಸಾಮೂಹಿಕ ರಾಷ್ಟ್ರೀಯ ಆದ್ಯತೆಯಾಗಬೇಕು ಎಂದು ಜಿತೇಂದ್ರ ಸಿಂಗ್ ಹೇಳಿದರು.







































































