ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ಸೋಮವಾರ ಸಂಜೆ ವಿಸ್ತರಣೆಯಾಯಿತು. ಕಾಂಗ್ರೆಸ್ ಹೈಕಮಾಂಡ್ 20 ನೂತನ ಸಚಿವರ ಹೆಸರನ್ನು ಅಂತಿಮಗೊಳಿಸಿದ್ದರೂ, ಕೊನೆ ಕ್ಷಣದಲ್ಲಿ 19 ಮಂದಿ ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಲೋಕಭವನದಲ್ಲಿ ಸಂಜೆ 5 ಗಂಟೆಗೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು 19 ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಚಿವ ಸ್ಥಾನಕ್ಕೆ ಅಂತಿಮಗೊಂಡಿದ್ದ ಪಟ್ಟಿಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರೂ ಇದ್ದರೂ, ಪ್ರಮಾಣವಚನ ಸ್ವೀಕರಿಸಲು ಮುಖ್ಯಮಂತ್ರಿ ಕಚೇರಿಯಿಂದ ಅವರಿಗೆ ಕರೆ ಹೋಗದ ಹಿನ್ನೆಲೆಯಲ್ಲಿ ಅವರು ಸಮಾರಂಭದಲ್ಲಿ ಭಾಗವಹಿಸಲಿಲ್ಲ.

ಮೂಲಗಳ ಪ್ರಕಾರ, ವಿಧಾನ ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಇನ್ನೂ ಪ್ರಮಾಣವಚನ ಸ್ವೀಕರಿಸದಿರುವುದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಅವರನ್ನು ಸಚಿವರ ಪಟ್ಟಿಯಿಂದ ಕೈಬಿಡುವ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಸಮಾರಂಭದಲ್ಲಿ ಮೊದಲಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಪುತ್ರ ಡಾ. ಅಜಯ್ ಸಿಂಗ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಎಚ್.ಸಿ. ಬಾಲಕೃಷ್ಣ, ಕೆ.ಎಸ್. ಬಸವಂತಪ್ಪ, ಬಸವರಾಜ್ ರಾಯರೆಡ್ಡಿ, ಎನ್. ಚಲುವರಾಯಸ್ವಾಮಿ, ಲಕ್ಷ್ಮಣ್ ಸವದಿ, ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಬಿ. ನಾಗೇಂದ್ರ, ಪಿ.ಎಂ. ನರೇಂದ್ರಸ್ವಾಮಿ, ಸಿ. ಪುಟ್ಟರಂಗಶೆಟ್ಟಿ, ಟಿ. ರಘುಮೂರ್ತಿ, ರಿಜ್ವಾನ್ ಅರ್ಷದ್, ರುದ್ರಪ್ಪ ಲಮಾಣಿ, ಸಂತೋಷ್ ಲಾಡ್, ಶಿವಲಿಂಗೇಗೌಡ, ಶಿವರಾಜ್ ತಂಗಡಗಿ, ವಿಜಯಾನಂದ ಕಾಶಪ್ಪನವರ್ ಹಾಗೂ ಜಮೀರ್ ಅಹ್ಮದ್ ಖಾನ್ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.






































































