ಕೋಲ್ಕತ್ತಾ: ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮತ್ತೆ ದೇಶಕ್ಕೆ ಮರಳಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ದೇಶಭ್ರಷ್ಟ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಆಗ್ರಹಿಸಿದ್ದಾರೆ.
ಕೋಲ್ಕತ್ತಾದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇಖ್ ಹಸೀನಾ ಅವರ ಪದಚ್ಯುತಿ ಮತ್ತು ಅವಾಮಿ ಲೀಗ್ ಮೇಲಿನ ನಿಷೇಧವನ್ನು “ಪ್ರಜಾಪ್ರಭುತ್ವ ವಿರೋಧಿ ಕ್ರಮ” ಎಂದು ಬಣ್ಣಿಸಿದರು. ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
“ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಮರಳಬೇಕು. ಅವರು ತಮ್ಮ ಪಕ್ಷವನ್ನು ಮತ್ತೆ ಮುನ್ನಡೆಸಬೇಕು ಎಂಬುದು ನನ್ನ ಆಶಯ. ಈ ಹಿಂದೆ ನಾನು ಅವರ ಆಡಳಿತವನ್ನು ಟೀಕಿಸಿದ್ದರೂ, ಒಂದು ರಾಜಕೀಯ ಪಕ್ಷವನ್ನು ನಿಷೇಧಿಸುವುದನ್ನು ನಾನು ಬೆಂಬಲಿಸುವುದಿಲ್ಲ” ಎಂದು ತಸ್ಲಿಮಾ ನಸ್ರಿನ್ ಹೇಳಿದರು.

ಬಾಂಗ್ಲಾದೇಶದಲ್ಲಿ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹಿಂದೂ, ಬೌದ್ಧ ಮತ್ತು ಕ್ರೈಸ್ತ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳು ಕಿರುಕುಳಕ್ಕೆ ಒಳಗಾಗುತ್ತಿವೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವವರ ವಿರುದ್ಧ ಸರ್ಕಾರ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ದೂರಿದರು.
ದೇಶದಲ್ಲಿ ಧಾರ್ಮಿಕ ಸಂಸ್ಥೆಗಳಿಗಿಂತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಸಮಾನತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಬೇಕೆಂದು ಅವರು ಅಭಿಪ್ರಾಯಪಟ್ಟರು.
ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯನ್ನು ಬೆಂಬಲಿಸಿದ ತಸ್ಲಿಮಾ ನಸ್ರಿನ್, ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಚಿತಪಡಿಸಲು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿಯೂ ಇದೇ ರೀತಿಯ ಕಾನೂನು ಅಗತ್ಯವಿದೆ ಎಂದು ಹೇಳಿದರು.
“ಎಲ್ಲ ನಾಗರಿಕರಿಗೂ ಒಂದೇ ಕಾನೂನು ಇರಬೇಕು. ಮಹಿಳೆಯರ ಮೇಲಿನ ತಾರತಮ್ಯ ನಿವಾರಣೆಗೆ ಏಕರೂಪ ನಾಗರಿಕ ಸಂಹಿತೆ ಅತ್ಯಗತ್ಯ” ಎಂದು ಅವರು ಅಭಿಪ್ರಾಯಪಟ್ಟರು.
ಸುಮಾರು ಎರಡು ದಶಕಗಳ ಬಳಿಕ ಕೋಲ್ಕತ್ತಾಗೆ ಭೇಟಿ ನೀಡಿರುವ ತಸ್ಲಿಮಾ ನಸ್ರಿನ್, ಕೆಲವು ಮದರಸಾಗಳಲ್ಲಿ ಧಾರ್ಮಿಕ ಉಗ್ರವಾದಕ್ಕೆ ಉತ್ತೇಜನ ದೊರೆಯುತ್ತಿದೆ ಎಂದು ಆರೋಪಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಸಮಾನತೆಯ ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಪುನರುಚ್ಚರಿಸಿದರು.






































































