ನವದೆಹಲಿ: ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ವಿನ್ಯಾಸ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ₹1.27 ಲಕ್ಷ ಕೋಟಿ ವೆಚ್ಚದ ‘ಸೆಮಿಕಾನ್ 2.0’ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸೆಮಿಕಾನ್ 1.0ರ ಯಶಸ್ಸಿನ ಮುಂದುವರಿದ ಭಾಗವಾಗಿರುವ ಈ ಯೋಜನೆ, ಚಿಪ್ ವಿನ್ಯಾಸ, ಉತ್ಪಾದನೆ, ಸಂಶೋಧನೆ, ನಾವೀನ್ಯತೆ ಮತ್ತು ಪ್ರತಿಭಾ ಅಭಿವೃದ್ಧಿಗೆ ದೀರ್ಘಾವಧಿಯ ನೀತಿ ಬೆಂಬಲ ಒದಗಿಸಲಿದೆ.
ಯೋಜನೆಯು ಆರು ಪ್ರಮುಖ ಸ್ತಂಭಗಳ ಮೇಲೆ ಕೇಂದ್ರೀಕರಿಸಿದೆ. ಚಿಪ್ ವಿನ್ಯಾಸ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ, ಸೆಮಿಕಂಡಕ್ಟರ್ ಉಪಕರಣಗಳು ಮತ್ತು ವಸ್ತುಗಳ ದೇಶೀಯ ಉತ್ಪಾದನೆ, ಹೊಸ ಫ್ಯಾಬ್ರಿಕೇಶನ್ (ಫ್ಯಾಬ್) ಘಟಕಗಳ ಸ್ಥಾಪನೆ, ATMP ಹಾಗೂ OSAT ಸೌಲಭ್ಯಗಳ ವಿಸ್ತರಣೆ, ಸುಧಾರಿತ ಸಂಶೋಧನೆ ಮತ್ತು ಪ್ರತಿಭಾ ಅಭಿವೃದ್ಧಿ ಇದರಲ್ಲಿ ಸೇರಿವೆ.

ಈಗಾಗಲೇ 105 ಸ್ಟಾರ್ಟ್‌ಅಪ್‌ಗಳು ಚಿಪ್ ವಿನ್ಯಾಸ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 315 ವಿಶ್ವವಿದ್ಯಾಲಯಗಳಲ್ಲಿ ಸೆಮಿಕಂಡಕ್ಟರ್ ವಿನ್ಯಾಸ ತರಬೇತಿ ನೀಡಲಾಗುತ್ತಿದೆ. ಸುಮಾರು 68 ಸಾವಿರ ವಿದ್ಯಾರ್ಥಿಗಳು ಈ ತರಬೇತಿ ಪಡೆದಿದ್ದಾರೆ.
ಸರ್ಕಾರದ ಪ್ರಕಾರ, ಸೆಮಿಕಾನ್ 1.0 ಅಡಿಯಲ್ಲಿ ₹1.64 ಲಕ್ಷ ಕೋಟಿ ಹೂಡಿಕೆಯೊಂದಿಗೆ 12 ಸೆಮಿಕಂಡಕ್ಟರ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಒಂದು ಸಿಲಿಕಾನ್ ಫ್ಯಾಬ್, ಒಂದು ಸಿಲಿಕಾನ್ ಕಾರ್ಬೈಡ್ ಫ್ಯಾಬ್, ಒಂದು ಗ್ಯಾಲಿಯಮ್ ನೈಟ್ರೈಡ್ ಮೈಕ್ರೋ-ಎಲ್ಇಡಿ ಫ್ಯಾಬ್ ಹಾಗೂ ಒಂಬತ್ತು ಪ್ಯಾಕೇಜಿಂಗ್ ಘಟಕಗಳು ಸೇರಿವೆ.
ಮೈಕ್ರಾನ್, ಕೇನ್ಸ್ ಮತ್ತು ಸಿಜಿ ಸೆಮಿ ಈಗಾಗಲೇ ವಾಣಿಜ್ಯ ಉತ್ಪಾದನೆ ಆರಂಭಿಸಿದ್ದು, ಮತ್ತೊಂದು ಘಟಕ 2026ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಇದಲ್ಲದೆ, 24 ಸೆಮಿಕಂಡಕ್ಟರ್ ವಿನ್ಯಾಸ ಯೋಜನೆಗಳಿಗೆ ಹಣಕಾಸು ನೆರವು ನೀಡಲಾಗಿದ್ದು, 105 ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಸ್‌ಎಂಇಗಳಿಗೆ ಉದ್ಯಮ-ಮಟ್ಟದ EDA ಪರಿಕರಗಳನ್ನು ಒದಗಿಸಲಾಗಿದೆ. ಇವು ಕೃತಕ ಬುದ್ಧಿಮತ್ತೆ (AI), ಡ್ರೋನ್, ಉಪಗ್ರಹ ಸಂವಹನ, IoT, ದೂರಸಂಪರ್ಕ, ಸ್ಮಾರ್ಟ್ ಮೀಟರ್ ಹಾಗೂ ಇತರೆ ತಂತ್ರಜ್ಞಾನಗಳಿಗೆ ಅಗತ್ಯವಾದ ಚಿಪ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ.
ಕೇಂದ್ರ ಸರ್ಕಾರದ ಪ್ರಕಾರ, ಸೆಮಿಕಾನ್ 2.0 ದೇಶದ ತಾಂತ್ರಿಕ ಸ್ವಾವಲಂಬನೆ, ರಾಷ್ಟ್ರೀಯ ಭದ್ರತೆ, ಉದ್ಯೋಗ ಸೃಷ್ಟಿ ಹಾಗೂ ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.






































































