ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಹಾಗೂ ಅಧಿಕಾರಿಗಳಿಗೆ 12.5 ಶೇಕಡಾ ವೇತನ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಪರಿಷ್ಕರಣೆ 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ವೇತನ ಪರಿಷ್ಕರಣೆಯಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಸುಮಾರು ₹72.80 ಕೋಟಿ ಹಾಗೂ ವರ್ಷಕ್ಕೆ ₹873.64 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಸುಮಾರು 1.05 ಲಕ್ಷ ಸಿಬ್ಬಂದಿಗೆ ಈ ವೇತನ ಪರಿಷ್ಕರಣೆಯ ಲಾಭ ದೊರೆಯಲಿದೆ.
ಈಗಾಗಲೇ 2023ರ ಮಾರ್ಚ್ ವೇತನ ಪರಿಷ್ಕರಣೆಗೆ ಸಂಬಂಧಿಸಿದ 26 ತಿಂಗಳ ಹಿಂಬಾಕಿ ಮೊತ್ತ ₹1271.92 ಕೋಟಿಗಳ ಪೈಕಿ ಮೊದಲ ಕಂತಿನ ₹450 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ.
ಇದಲ್ಲದೆ, 2025ರ ಏಪ್ರಿಲ್ 1ರಿಂದ 2026ರ ಜೂನ್ 30ರವರೆಗೆ ಅನ್ವಯವಾಗುವ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಮುಂದಿನ ದಿನಗಳಲ್ಲಿ ಪಾವತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
























































