ನೋಯ್ಡಾ: ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಪೊಲೀಸ್‌ರು ನೋಯ್ಡಾದ ಸೆಕ್ಟರ್-16ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಕಾಲ್ ಸೆಂಟರ್‌ನ್ನು ಭೇದಿಸಿ 16 ಮಂದಿ ಸೈಬರ್ ವಂಚಕರನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಈ ಗ್ಯಾಂಗ್ ವಿದೇಶಿ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾವತಿಸಿದ ಆನ್‌ಲೈನ್ ಜಾಹೀರಾತುಗಳ ಮೂಲಕ ಬಲೆಗೆ ಬೀಳಿಸುತ್ತಿತ್ತು. ಹ್ಯಾಕಿಂಗ್ ಹಾಗೂ ಡೇಟಾ ಕಳ್ಳತನದ ಭಯ ಹುಟ್ಟಿಸಿ, ತಾಂತ್ರಿಕ ಬೆಂಬಲ ಸಿಬ್ಬಂದಿಗಳಂತೆ ನಟಿಸಿ ಹಣ ವಂಚಿಸುತ್ತಿದ್ದರು ಎನ್ನಲಾಗಿದೆ.
ಗುಪ್ತಚರ ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ನಡೆದ ದಾಳಿಯಲ್ಲಿ 4 ಲ್ಯಾಪ್‌ಟಾಪ್‌ಗಳು, 15 ಡೆಸ್ಕ್‌ಟಾಪ್‌ಗಳು, 15 ಮಾನಿಟರ್‌ಗಳು, 16 ಮೊಬೈಲ್‌ಗಳು, 16 ಹೆಡ್‌ಸೆಟ್‌ಗಳು, 2 ರೂಟರ್‌ಗಳು ಮತ್ತು ಮೋಡೆಮ್ ಸೇರಿದಂತೆ ಹಲವು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟೋಲ್-ಫ್ರೀ ಸಂಖ್ಯೆಗಳೊಂದಿಗೆ ಜಾಹೀರಾತು ನೀಡಿ ವಿದೇಶಿ ಪ್ರಜೆಗಳನ್ನು ಕರೆ ಮಾಡಲು ಪ್ರೇರೇಪಿಸುತ್ತಿದ್ದರು. ಬಳಿಕ ಕರೆಗಳನ್ನು ತಮ್ಮ ಸಾಫ್ಟ್‌ವೇರ್ ವ್ಯವಸ್ಥೆಗೆ ಕನೆಕ್ಟ್ ಮಾಡಿ, “ಕಂಪ್ಯೂಟರ್ ಹ್ಯಾಕ್ ಆಗಿದೆ” ಎಂದು ಭಯ ಹುಟ್ಟಿಸುತ್ತಿದ್ದರು ಎನ್ನಲಾಗಿದೆ.
ಸ್ಕ್ರೀನ್-ಶೇರ್ ಅಪ್ಲಿಕೇಶನ್‌ಗಳ ಮೂಲಕ ಬಲಿಪಶುಗಳ ಕಂಪ್ಯೂಟರ್‌ಗಳಿಗೆ ಪ್ರವೇಶ ಪಡೆದು, ಬ್ಯಾಂಕಿಂಗ್ ವಿವರಗಳನ್ನು ಕಲೆಹಾಕಿ ಹಣ ದೋಚುತ್ತಿದ್ದರು. ಕೆಲ ಸಂದರ್ಭಗಳಲ್ಲಿ ಕಂಪ್ಯೂಟರ್ ಸ್ಕ್ರೀನ್‌ನ್ನು ಕಪ್ಪಾಗಿಸಿ, ಬಲಿಪಶುಗಳನ್ನು ಮತ್ತಷ್ಟು ಭಯಭೀತರನ್ನಾಗಿಸುತ್ತಿದ್ದರು. ಪ್ರತಿ ವಂಚನೆಯಲ್ಲೂ $100 ರಿಂದ $500 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದೋಚಲಾಗುತ್ತಿತ್ತು. ದೋಚಿದ ಹಣವನ್ನು ಕ್ರಿಪ್ಟೋಕರೆನ್ಸಿಗೆ ಪರಿವರ್ತಿಸಿ, ಹವಾಲಾ ಮಾರ್ಗಗಳ ಮೂಲಕ ಹಂಚಿಕೊಳ್ಳಲಾಗುತ್ತಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ವಶಪಡಿಸಿಕೊಂಡ ಸಾಧನಗಳ ಪರಿಶೀಲನೆಯಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟಿನ ಸುಳಿವುಗಳು ಪತ್ತೆಯಾಗಿವೆ. ಪ್ರಕರಣವನ್ನು ಸೈಬರ್ ಕ್ರೈಮ್ ಠಾಣೆಯಲ್ಲಿ ದಾಖಲಿಸಿ, ಬಿಎನ್‌ಎಸ್ ಹಾಗೂ ಐಟಿ ಕಾಯ್ದೆಯ ಅಡಿಯಲ್ಲಿ ತನಿಖೆ ಮುಂದುವರಿದಿದೆ.
ಇದೇ ವೇಳೆ, ಅಪರಿಚಿತ ಕರೆಗಳು ಹಾಗೂ ಜಾಹೀರಾತುಗಳನ್ನು ನಂಬಬಾರದು ಎಂದು ಪೊಲೀಸರು ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ತಾಂತ್ರಿಕ ಬೆಂಬಲದ ಹೆಸರಿನಲ್ಲಿ ಯಾರಾದರೂ ಸಂಪರ್ಕಿಸಿದರೆ ಎಚ್ಚರಿಕೆಯಿಂದಿರಬೇಕು, ಸ್ಕ್ರೀನ್ ಹಂಚಿಕೆ ಅಥವಾ ಬ್ಯಾಂಕ್ ವಿವರಗಳನ್ನು ನೀಡಬಾರದು ಎಂದು ಸೂಚಿಸಿದ್ದಾರೆ. ಸೈಬರ್ ವಂಚನೆ ಸಂಭವಿಸಿದರೆ ತಕ್ಷಣವೇ ಸಹಾಯವಾಣಿ 1930ಕ್ಕೆ ಕರೆ ಮಾಡುವುದು ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ದೂರು ದಾಖಲಿಸುವಂತೆ ಮನವಿ ಮಾಡಿದ್ದಾರೆ.























































