ಬೆಂಗಳೂರು: ಸಿಎಂ ಗದ್ದುಗೆಗಾಗಿ ಡಿಕೆಶಿ-ಸಿದ್ದರಾಮಯ್ಯ ವಾರ್ ಶುರುವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕರ ನಡುವಿನ ಟೀಕಾಸ್ತ್ರಗಳ ಕುರಿತಂತೆ ಶುಕ್ರವಾರ ಪ್ರತಿಕ್ರಿಯಿಸಿರುವ ಅಶೋಕ್, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವಿನ ವಾರ್ ಮತ್ತೆ ಆರಂಭವಾಗಿದೆ. ಇನ್ನು ಮುಂದೆಯೂ ಅಭಿವೃದ್ಧಿ ಬದಲು ಕೇವಲ ಕುರ್ಚಿ ಕಾಳಗ ಕಂಡುಬರಲಿದೆ ಎಂದು ವಿಶ್ಲೇಷಿಸಿದ್ದಾರೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ಬದಲು ಯತೀಂದ್ರ ಅವರೇ ನಮ್ಮ ನಾಯಕ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳಬೇಕಿದೆ. ಎಲ್ಲರೂ ಹೈಕಮಾಂಡ್ ತೀರ್ಮಾನ ಎಂದರೆ, ಯತೀಂದ್ರ ಮಾತ್ರ ನಮ್ಮಪ್ಪನೇ ಪೂರ್ಣಾವಧಿ ಸಿಎಂ ಎನ್ನುತ್ತಾರೆ. ಆದ್ದರಿಂದ ಇದು ಪವರ್‌ಲೆಸ್ ಹೈಕಮಾಂಡ್ ಆಗಿದೆ ಎಂದು ಅಶೋಕ್ ಬಣ್ಣಿಸಿದರು.
ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಸಭೆ ನಡೆಯಲಿದೆ. ಎಲ್ಲ ಶಾಸಕರು ಹಾಗೂ ಜಿಲ್ಲಾ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಬಿಜೆಪಿ ಬಿಬಿಎಂಪಿಯಲ್ಲಿ ಗೆದ್ದಿತ್ತು. ಈಗ ನಿರಂತರವಾಗಿ ತೆರಿಗೆಗಳನ್ನು ಹಾಕಿರುವುದರಿಂದ ಕಾಂಗ್ರೆಸ್‌ಗೆ ಜನರು ಕಪಾಳ ಮೋಕ್ಷ ಮಾಡಲಿದ್ದಾರೆ. ಬಿಜೆಪಿ ಐದು ಪಾಲಿಕೆಗಳನ್ನು ಗೆಲ್ಲುವ ಕುರಿತು ತಂತ್ರಗಾರಿಕೆ ಮಾಡಲಿದ್ದೇವೆ ಎಂದು ಅಶೋಕ್ ತಿಳಿಸಿದರು.
























































