ನವದೆಹಲಿ: ದೇಶದ ಯುವಕರು 18 ವರ್ಷ ತುಂಬಿದ ಕೂಡಲೇ ಮತದಾರರಾಗಿ ನೋಂದಾಯಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮನವಿ ಮಾಡಿದರು. ಇದರಿಂದ ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳುತ್ತದೆ ಹಾಗೂ ನಾಗರಿಕರಾಗಿ ಸಂವಿಧಾನಾತ್ಮಕ ಕರ್ತವ್ಯವನ್ನು ಪೂರೈಸಿದಂತಾಗುತ್ತದೆ ಎಂದು ಅವರು ಹೇಳಿದರು.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 130ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜನವರಿ 26ರಂದು ಗಣರಾಜ್ಯೋತ್ಸವ ಆಚರಣೆ ನಡೆಯಲಿದ್ದು, ಇದೇ ದಿನ ಸಂವಿಧಾನ ಜಾರಿಗೆ ಬಂದಿತ್ತು ಎಂದು ಸ್ಮರಿಸಿದರು. ಈ ದಿನವು ಸಂವಿಧಾನದ ಶಿಲ್ಪಿಗಳಿಗೆ ಗೌರವ ಸಲ್ಲಿಸುವ ಮಹತ್ವದ ಅವಕಾಶವನ್ನೂ ನೀಡುತ್ತದೆ ಎಂದು ಅವರು ಹೇಳಿದರು.
ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದು ಉಲ್ಲೇಖಿಸಿದ ಪ್ರಧಾನಿ, “ಮತದಾರರು ಪ್ರಜಾಪ್ರಭುತ್ವದ ಆತ್ಮ. 18 ವರ್ಷ ತುಂಬಿದಾಗ ಮತದಾರರಾಗುವುದು ಜೀವನದ ಒಂದು ಸಾಮಾನ್ಯ ಹಂತವೆಂದು ಕಾಣಬಹುದು. ಆದರೆ, ಭಾರತೀಯರ ಜೀವನದಲ್ಲಿ ಇದು ಅತ್ಯಂತ ಮಹತ್ವದ ಮೈಲಿಗಲ್ಲು. ಆದ್ದರಿಂದ ಮತದಾರರಾಗುವುದನ್ನು ದೇಶವ್ಯಾಪಿಯಾಗಿ ಆಚರಿಸುವುದು ಅಗತ್ಯ” ಎಂದರು.
ಯುವಕರು ಮೊದಲ ಬಾರಿಗೆ ಮತದಾರರಾಗುವ ಸಂದರ್ಭವನ್ನು ಸಮಾಜವು ಒಟ್ಟಾಗಿ ಸಂಭ್ರಮಿಸುವಂತೆ ಕರೆ ನೀಡಿದ ಅವರು, ನೆರೆಹೊರೆ, ಗ್ರಾಮ ಅಥವಾ ನಗರಮಟ್ಟದಲ್ಲಿ ಅಭಿನಂದನೆ ಸಲ್ಲಿಸಿ ಸಿಹಿತಿಂಡಿಗಳನ್ನು ಹಂಚಿಕೊಳ್ಳುವುದರಿಂದ ಮತದಾನದ ಮಹತ್ವದ ಕುರಿತು ಜಾಗೃತಿ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು. ಇದರಿಂದ ಮತದಾರರಾಗಿರುವ ಹೆಮ್ಮೆ ಹಾಗೂ ಹೊಣೆಗಾರಿಕೆಯ ಭಾವನೆ ಗಟ್ಟಿಯಾಗುತ್ತದೆ ಎಂದರು.
ಚುನಾವಣಾ ಪ್ರಕ್ರಿಯೆಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಎಲ್ಲರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಮತದಾರರಾಗುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ “ಶ್ರೇಷ್ಠ ಸವಲತ್ತು ಮತ್ತು ಜವಾಬ್ದಾರಿ” ಎಂದು ಹೇಳಿದರು. ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳು ಮತದಾರರಾಗುವ ಸಂದರ್ಭವನ್ನು ಆಚರಿಸಬೇಕು ಎಂಬ ಸಲಹೆಯನ್ನೂ ನೀಡಿದರು.
ಇದಕ್ಕೂ ಮೊದಲು, ಮೈ-ಭಾರತ್ ಸ್ವಯಂಸೇವಕರು ಮತ್ತು ಯುವಜನರಿಗೆ ಪತ್ರ ಬರೆದಿದ್ದ ಪ್ರಧಾನಿ ಮೋದಿ, ಮತದಾರರಾಗುವ ಕ್ಷಣವನ್ನು ಸಂಭ್ರಮಿಸುವಂತೆ ಮನವಿ ಮಾಡಿದ್ದರು. ಹೊಸ ಪೀಳಿಗೆಯು ‘ಮಾಡಬಹುದು’ ಎಂಬ ಮನೋಭಾವದೊಂದಿಗೆ ದೇಶದ ಭವಿಷ್ಯ ರೂಪಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
























































