ಬೆಂಗಳೂರು: ನರೇಗಾ (MGNREGA) ಹೆಸರು ಬದಲಾವಣೆ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ಸಮರ ಸಾರಿರುವ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ, ಇದೀಗ ಕನ್ನಡ ಭಾಷಾ ವಿಚಾರದಲ್ಲೂ ಕಾನೂನು ಜಾರಿ ಸಂಬಂಧ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಪರಿಶೀಲನೆ ನಡೆದಿದ್ದು, ಒಂದೊಮ್ಮೆ ಕನ್ನಡ ಸಂಬಂಧದ ಕಾನೂನು ಜಾರಿಗೆ ಬಂದರೆ, ಕೇರಳದ ಭಾಷಾ ಮಸೂದೆಗೆ ಪರ್ಯಾಯ ಕ್ರಮ ಎಂಬಂತಾಗಬಹುದು, ಜೊತೆಗೆ ಹಿಂದಿ ಏರಿಕೆಯ ವಿವಾದಕ್ಕೂ ತೆರೆ ಬೀಳುವ ಸಾಧ್ಯತೆಗಳಿವೆ.
ಹಿಂದಿ ಭಾಷಾ ಏರಿಕೆ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳ ನಿಲುವು ಒಂದೇ ರೀತಿ ಇದ್ದು, ಎಲ್ಲಾ ರಾಜಕೀಯ ಪಕ್ಷಗಳೂ ಮಾತೃ ಭಾಷೆಯ ಬಗ್ಗೆ ಪ್ರತಿಪಾದಿಸುತ್ತಿವೆ. ಇದಕ್ಕೆ ಪರ್ಯಾಯ ಎಂಬಂತೆ ಮಾನವ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್ (CRF)’ ಕಾರ್ಯದರ್ಶಿ ಜಯಪ್ರಕಾಶ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ 2025ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮನವಿ ಸಲ್ಲಿಸಿ ಎಲ್ಲಾ ಉದ್ಯಮಗಳಲ್ಲಿ 30% ಹುದ್ದೆಗಳನ್ನು ಸ್ಥಳೀಯ ಭಾಷೆ ಬಲ್ಲವರಿಗೆ ನೀಡುವ ನಿಯಮ ಜಾರಿಗೆ ತರಲು ಒತ್ತಾಯಿಸಿತ್ತು. ಈ ಮನವಿ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಸಕಾರಾತ್ಮಕ ನಿಲುವು ತಳೆದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಕನ್ನಡ ಭಾಷಾ ಮಸೂದೆ ಜಾರಿಗೆ ತಂದಲ್ಲಿ ಕರ್ನಾಟಕದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಬಹುದು. ಈ ನಿಟ್ಟಿನಲ್ಲಿ ಆಡಳಿತ-ಪ್ರತಿಪಕ್ಷಗಳು ಸಂಘಟನಾತ್ಮಕವಾಗಿ ನಿರ್ಧಾರ ಕೈಗೊಳ್ಳಬೇಕೆಂದು ಕೋರಿ, ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಕಾರ್ಯದರ್ಶಿ ಜಯಪ್ರಕಾಶ್ ಅವರು ಗುರುವಾರ (22.01.2026) ರಾಜ್ಯ ಸರ್ಕಾರಕ್ಕೆ ಮತ್ತೊಂದು ಮನವಿ ಸಲ್ಲಿಸಿದ್ದರು. ಸಿಎಂ, ಡಿಸಿಎಂ, ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಿಗೆ, ಹಾಗೂ ರಾಜ್ಯದ ಎಲ್ಲಾ MLA-MLC ಗಳಿಗೆ ಈ ಮನವಿ ಸಲ್ಲಿಸಿರುವ ಜಯಪ್ರಕಾಶ್, ಕರ್ನಾಟಕದಲ್ಲಿ ಸೂಕ್ತ ಕಾನೂನು ಜಾರಿಗೊಳಿಸುವ ಸಂಬಂಧ ಭಾಷಾ ಮಸೂದೆ ಜಾರಿಗೆ ತರಲು ಆಗ್ರಹಿಸಿದ್ದರು.
ಏನಿದು ಭಾಷಾ ಮಸೂದೆ?
ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಸಹಿತ ರಾಜ್ಯದ ಅನೇಕ ಜಿಲ್ಲಾ ಕೇಂದ್ರಗಳು ಪ್ರಮುಖ ವಾಣಿಜ್ಯ ಕೇಂದ್ರಗಳೆನಿಸಿವೆ. ಇದರಿಂದಾಗಿ ಕರ್ನಾಟಕದ ಬಹುತೇಕ ನಗರಗಳು ಹೊರ ರಾಜ್ಯಗಳ ಜನರ ಹಾಗೂ ಕನ್ನಡೇತರರ ವಲಸೆಯ ತಾಣ ಎಂಬಂತಾಗಿದೆ. ಬಹುತೇಕ ಸಂಸ್ಥೆಗಳು ಹೊರ ರಾಜ್ಯಗಳ ಜನರ ಹಾಗೂ ಪರಭಾಷಿಗರ ಹಿಡಿತದಲ್ಲಿದ್ದು, ಕರುನಾಡಿನ ಜನರು ಉದ್ಯೋಗದಿಂದ ವಂಚಿತರಾಗುತ್ತಿದ್ದರೆ. ಸ್ವಉದ್ಯೋಗಕ್ಕೆ ಪೂರಕ ಸಂಪನ್ಮೂಲಗಳೂ ಹೊರ ರಾಜ್ಯದವರ ಪಾಲಾಗುತ್ತಿದೆ. ಕೂಲಿ ಕೆಲಸಕ್ಕೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸಕ್ತ ಬ್ಯಾಂಕಿಂಗ್, ಕೈಗಾರಿಕೆ ಹಾಗೂ ಇನ್ನಿತರ ವಾಣಿಜ್ಯೋದ್ಯಮ ಸಂಸ್ಥೆಗಳ ಕಚೇರಿಗಳಲ್ಲಿ ಪರಭಾಷಿಗರನ್ನೇ ನೇಮಕ ಮಾಡಲಾಗಿರುತ್ತದೆ. ಕನ್ನಡವನ್ನೇ ತಿಳಿಯದ ಈ ಜನರ ಜೊತೆ ಕರ್ನಾಟಕದ ಜನರು ಸಂವಹನ ನಡೆಸಲಾಗದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಸಂಬಂಧ 29.04.2025ರಂದು ಪ್ರಧಾನಿಗೆ ಹಾಗೂ 23.05.2025 ರಂದು ಕರ್ನಾಟಕದ ಮುಖ್ಯಮಂತ್ರಿ, ಉಪ ಮುಖ್ಯ ಮಂತ್ರಿ, ಹಾಗೂ ಪ್ರತಿಪಕ್ಷಗಳ ನಾಯಕರಿಗೆ ಮನವಿ ಸಲ್ಲಿಸಿ ಕನ್ನಡಿಗರಿಗೆ ಹಾಗೂ ರಾಜ್ಯದ ಜನರಿಗೆ ಅನುಕೂಲವಾಗುವ ರೀತಿ ಸೂಕ್ತ ಕಾನೂನು ಜಾರಿಗೆ ತರಲು CRF ಒತ್ತಾಯಿಸಿತ್ತು. ಸೇವೆಯ ಹೆಸರಲ್ಲಿ ಬಹುತೇಕ ಬ್ಯಾಂಕುಗಳು, ವಾಣಿಜ್ಯೋದ್ಯಮ ಸಂಸ್ಥೆಗಳು ಜನ-ಸಾಮಾನ್ಯರನ್ನು ಶೋಷಣೆಗೆ ಒಳಪಡಿಸುತ್ತಿವೆ. ರಾಜ್ಯದ ಬಹುಪಾಲು ಮಂದಿ ಮಾತೃಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ವ್ಯವಹರಿಸುವ ಸಾಮರ್ಥ್ಯವನ್ನು ಇನ್ನೂ ಹೊಂದಿಲ್ಲ. ಅಂಥವರು ತಮ್ಮ ಪ್ರಾದೇಶಿಕ ಭಾಷೆಯಲ್ಲಷ್ಟೇ ವ್ಯವಹರಿಸಲು ಶಕ್ತರಾಗಿದ್ದಾರೆ. ಅಂಥವರನ್ನು ಹೊರ ರಾಜ್ಯಗಳ ಭಾಷಿಗರು ತಮ್ಮದೇ ಆದ ಪ್ರಭಾವದಿಂದ ಶೋಷಣೆಗೊಳಪಡಿಸುವ ಪ್ರಸಂಗಗಳು ನಡೆಯುತ್ತಿವೆ. ಈ ಕಚೇರಿಗಳಲ್ಲಿ ದೂರವಾಣಿ ವ್ಯವಸ್ಥೆಗಳೂ ಇಲ್ಲ. ಪ್ರತಿಯೊಂದಕ್ಕೂ ಕಸ್ಟಮರ್ ಕೇರ್ ಅನ್ನು ಅವಲಂಬಿಸಬೇಕಿದ್ದು, ಅಲ್ಲೂ ಹಿಂದಿ-ಇಂಗ್ಲಿಷ್ ಮಾತ್ರ ಬಳಕೆಯಾಗುತ್ತದೆ. ಈ ಪರಿಸ್ಥಿಯಿಂದಾಗಿ ಡಿಜಿಟಲ್ ವಂಚನೆ ಪ್ರಕರಣಗೂ ಹೆಚ್ಚಾಗುತ್ತಿವೆ.
ಇದರಿಂದ ಜನರನ್ನು ಪಾರು ಮಾಡಲು ಭಾಷಾ ಮಸೂದೆ ಅಗತ್ಯವಿದೆ ಎಂದು ಪ್ರತಿಪಾದಿಸಲಾಗಿದೆ. ಇದರ ಜೊತೆಯಲ್ಲೇ, ಕರ್ನಾಟಕದ ಬಹುತೇಕ ಕಂಪನಿಗಳು ಹೊರ ರಾಜ್ಯಗಳ ಜನರ ಹಿಡಿತದಲ್ಲಿದ್ದು, ಬಹುತೇಕ ಹುದ್ದೆಗಳು ಹೊರ ರಾಜ್ಯಗಳ ವ್ಯಕ್ತಿಗಳಿಂದ ನಿರ್ವಹಿಸಲ್ಪಡುತ್ತಿವೆ. ಕರ್ನಾಟಕದ ಸ್ಥಳೀಯರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಹೀಗಿರುವಾಗ ಕರ್ನಾಟಕದ ಸ್ಥಳೀಯರಿಗೆ ಸಾಕಷ್ಟು ಉದ್ಯೋಗ ಸಿಗುವಂತಾಗಬೇಕು, CSR (ಕಾರ್ಪೊರೇಟ್ ಸಾರ್ವಜನಿಕ ಹೊಣೆಗಾರಿಕೆ) ಮೊದಲಾದ ಮೂಲಗಳ ಕಾರ್ಯಕ್ರಮಗಳು ಕೂಡಾ ಕಾಮಗಾರಿಗಳಿಗೆ ಸೀಮಿತವಾಗದೆ ಕರ್ನಾಟಕದ ಜನರ ಹಿತಾಸಕ್ತಿ, ಉದ್ಯೋಗ ಸೃಷ್ಟಿ, ಸಮುದಾಯದ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವಂತಾಗಬೇಕು. ಹೊಸ ಕಾನೂನು ಜಾರಿಯಾದಲ್ಲಿ ಮಾತ್ರ ಇದು ಸಾಧ್ಯ ಎಂದು CRF ಪ್ರತಿಪಾದಿಸಿದೆ.
ಇದೀಗ CRF, ರಾಜ್ಯದ ಎಲ್ಲಾ ಪಕ್ಷಗಳ ಎಲ್ಲಾ ಶಾಸಕರ ಮುಂದಿಟ್ಟಿರುವ ಪ್ರಸ್ತಾವನೆ ಹಾಗೂ ಇದಕ್ಕೆ ಪರ್ಯಾಯವಾಗಿ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಪರಿಶೀಲನೆಯು ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ.

























































