ಬೆಂಗಳೂರು: ಕೋರಮಂಗಲ RTO ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಗುಜರಾತ್‌ನಲ್ಲಿ ಇದ್ದ ಸುಮಾರು 50 ಶಾಲಾ ಬಸ್‌ಗಳಿಗೆ ಕೋರಮಂಗಲ ಆರ್‌ಟಿಒ ಕಚೇರಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಸ್ಸುಗಳಲ್ಲಿ ಇರಬೇಕಾದ ಸುರಕ್ಷತಾ ಮಾನದಂಡಗಳು [ಸೀಟ್ ಬೆಲ್ಟ್, ತುರ್ತು ನಿರ್ಗಮನ, ಪ್ರಥಮ ಚಿಕಿತ್ಸಾ ಕಿಟ್, ವೇಗ ನಿಯಂತ್ರಕ ಇತ್ಯಾದಿ] ಸೇರಿದಂತೆ ಸಂಚರಿಸಲು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸದೆ ಅಧಿಕಾರಿಗಳು ಎಫ್.ಸಿ ನೀಡಿದ್ದಾರೆ ಎನ್ನಲಾಗಿದೆ.
ಈ ಅಕ್ರಮವನ್ನು ಗುಜರಾತ್ ರಾಜ್ಯದ ಸಾರಿಗೆ ಅಧಿಕಾರಿಗಳೇ ಬಯಲಿಗೆಳೆದಿದ್ದಾರೆ ಎಂದು ಆರೋಪಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಲಂಚದಾಸೆಗೆ ಪ್ರಯಾಣಿಕರ ಸುರಕ್ಷತೆಯನ್ನು ರಾಜಿಮಾಡಿಕೊಳ್ಳುವ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು. ಹಾಗೂ ಅವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ್, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಕೈಗೊಂಡು, ಬಸ್ಸುಗಳಿಗೆ ಎಫ್.ಸಿ. ನೀಡುವ ನಿಯಮಾವಳಿಗಳನ್ನು ಇನ್ನಷ್ಟು ಬಿಗಿ ಹಾಗೂ ಭ್ರಷ್ಟ ಮುಕ್ತಗೊಳಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ.


























































