ಮಂಗಳೂರು: ಸಂಘ ಶತಾಬ್ದಿ ಅಂಗವಾಗಿ ದೇಶವ್ಯಾಪಿ ಸ್ವಯಂಸೇವಕರಲ್ಲಿ ರಣೋತ್ಸಾಹ ಕಂಡುಬರುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಕೈಗೊಂಡಿದ್ದಾರೆ.
ರಾಷ್ಟ್ರೀಯ ನಾಯಕರ ಕರೆಯಂತೆ ಮಂಗಳೂರು ವಿಭಾಗದ ಎಲ್ಲೆಡೆ ‘ಹಿಂದೂ ಸಂಗಮ’ದ ಸಿದ್ಧತೆಯ ಸಡಗರ ಮನೆಮಾಡಿದೆ. ಅದರಲ್ಲೂ ಕರಾವಳಿಯಲ್ಲಿ ಹಿಂದೂ ಸಂಘಟನೆಗೆ ಶಕ್ತಿ ತುಂಬಿದ್ದ ಪೊಳಲಿಯಲ್ಲಿ ಈ ಬಾರಿ ಕೇಸರಿ ಶಕ್ತಪ್ರದರ್ಶನ ರೀತಿಯಲ್ಲಿ ‘ಹಿಂದೂ ಸಂಗಮ’ ಬೃಹತ್ ಸಮಾವೇಶ ನಡೆಸಲು ಅಂತಿಮ ಸಿದ್ಧತೆಗಳು ನಡೆದಿವೆ. ಈ ಸಂಬಂಧ ಪೊಳಲಿಯ ಚೆಂಡಿನ ಗದ್ದೆಯಲ್ಲಿ ಹಾಗೂ ತೆಂಕಬೆಳ್ಳೂರು ಬಳಿ ಧ್ವಜಾರೋಹಣ ಮೂಲಕ ಭವ್ಯ ಕಾರ್ಯಕ್ರಮಕ್ಕೆ ಭಾನುವಾರ ಮುನ್ನುಡಿ ಬರೆಯಲಾಯಿತು.
ಕರಿಯಂಗಳ ಮಂಡಲ ವತಿಯಿಂದ 25-01-2026 ಸಂಜೆ 3 ಗಂಟೆಗೆ ಪೊಳಲಿ ಚೆಂಡಿನ ಗದ್ದೆಯಲ್ಲಿ ನಡೆಯುವ ಹಿಂದೂ ಸಂಗಮ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ತೆಂಕಬೆಳ್ಳೂರು ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ ) ಕಮ್ಮಾಜೆ ಇದರ ವಠಾರದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿ ಭಾನುವಾರ ಬೆಳಿಗ್ಗೆ ಧರ್ಮ ಧ್ವಜವನ್ನು ಪ್ರದರ್ಶಿಸಿತು ಮಂಡಲ ಆಯೋಜನ ಸಮಿತಿ ಸಹ ಸಂಚಾಲಕರಾದ ಕಿಶೋರ್ ಪಲ್ಲಿಪಾಡಿ ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘ ಮಂಡಲ ಕಾರ್ಯವಾಹ ಜಗದೀಶ್ ಬಡಗಬೆಳ್ಳೂರು, ಹಿಂದೂ ಜನಜಾಗ್ರತಿ ಬಂಟ್ವಾಳ ಸಮನ್ವಯಕರಾದ ರಾಧಾಕೃಷ್ಣ ಕಲ್ಲಡ್ಕ, ನಾರಾಯಣ ಸಜೀಪ, ನಾಗಶ್ರೀಯ ಅಧ್ಯಕ್ಷ ರಾಮದಾಸ್ ಕಮ್ಮಾಜೆ, ಭಾರತೀಯ ಜನತಾ ಪಾರ್ಟಿ ತೆಂಕಬೆಳ್ಳೂರು ಗ್ರಾಮ ಸಂಚಾಲಕ ಮುರಳೀಧರ ಶೆಟ್ಟಿ, ತೆಂಕಬೆಳ್ಳೂರು ಹಿಂದೂ ಸಂಗಮ ಸಂಯೋಜಕ ಚಂದ್ರಹಾಸ ಅಜ್ಜಿನಡ್ಕ, ಸಂಘಟನೆ ಪ್ರಮುಖರಾದ ತಿರುಲೇಶ್ ಬೆಳ್ಳೂರು, ತಿರುಮಲೇಶ್ ಬೆಳ್ಳೂರು, ನಾಗಶ್ರೀ ಉಪಾಧ್ಯಕ್ಷ ರಾಮಚಂದ್ರ ವರಕೋಡಿ, ತಿಮ್ಮಪ್ಪ ಕಮ್ಮಾಜೆ, ಕೇಶವ ಧನುಪೂಜೆ, ಪದ್ಮನಾಭ ಮಂಗಾಜೆ, ಸಂತೋಷ ದೇವಾಡಿಗ, ರಾಜೇಶ್ ಕಮ್ಮಾಜೆ, ರಂಗ ಕಮ್ಮಾಜೆ ಸಹಿತ ಸಂಘಟನೆಯ ಅನೇಕ ಪ್ರಮುಖರು ಉಪಸ್ಥಿತರಿದ್ದರು.


























































