ಬೆಂಗಳೂರು: ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮ್ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಉದ್ಯಮಿ ಒಕ್ಕಲಿಗ ಎಕ್ಸ್ಪೋ- 2026” ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ಭೂಮಿ ಮಕ್ಕಳಾಗಿರುವ ನೀವು ಸಮಾಜಕ್ಕೆ ಒಳ್ಳೆಯ ಸೇವೆ ಮಾಡುತ್ತಿದ್ದೀರಿ. ಹೊಸ ಉದ್ಯಮಿಗಳಾಗಿ ನೀವು ತಯಾರಾಗುತ್ತಿದ್ದೀರಿ. ತುಂಬಾ ಜನರು ಉದ್ಯಮದಲ್ಲಿ ಯಶಸ್ವಿಯಾಗಿದ್ದಾರೆ. ರಾಜಕಾರಣ ಬಿಟ್ಟು ಬಹಳ ಜನ ಬದುಕಿನಲ್ಲಿ ಯಶಸ್ವಿಯಾಗಿದ್ದಾರೆ’ ಎಂದರು.
ಎಲ್ಲಿ ಶ್ರಮವಿದೆಯೋ… ಅಲ್ಲಿ ಫಲವಿದೆ. ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ದೇವರು ಕೊಟ್ಟ ಅವಕಾಶದಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಉದ್ಯಮದಲ್ಲಿ ಎಲ್ಲರೂ ನಂಬಿಕೆ ಉಳಿಸಿಕೊಳ್ಳಬೇಕು. ನಂಬಿಕೆ ಉಳಿಸಿಕೊಂಡಾಗ ನಿಮಗೆ ಕ್ಲೈಂಟ್ಸ್ ಬರುತ್ತಾರೆ. ಶಾಲೆ ನಡೆಸ್ತಿದ್ದೀರೋ, ಕಟ್ಟಡ ಕಟ್ಟುತ್ತಿದ್ದೀರೋ, ಎಲೆಕ್ಟ್ರಿಕ್ ಕೆಲಸ ಮಾಡ್ತಿದ್ದೀರೋ, ಯಾವುದೇ ಉದ್ಯಮ ಮಾಡಿದರೂ ನಿಮ್ಮ ಮೇಲೆ ಕ್ಲೈಂಟ್ಸ್ಗೆ ನಂಬಿಕೆ ಇರಬೇಕು ಎಂದರು.
ಉದ್ಯಮಿಗಳು ನೀವು ಸರ್ಕಾರಕ್ಕೂ ಸಹಾಯ ಮಾಡ್ತಿದ್ದೀರಿ, ಕೆಲಸ ಮಾಡುವವರಿಗೂ ಸಹಾಯ ಮಾಡ್ತಿದ್ದೀರಿ, ನಿಮ್ಮನ್ನು ನಂಬಿರುವವರಿಗೂ ಸಹಾಯ ಮಾಡ್ತಿದ್ದೀರಿ. ಎಷ್ಟೊಂದು ಶ್ರಮವಹಿಸಿ ಯಶಸ್ಸು ಗಳಿಸುತ್ತಿರುವ ಉದ್ಯಮಿಗಳಿಗೆ ಡಿಕೆಶಿ ಶುಭ ಹಾರೈಸಿದರು.



















































