ಬೆಂಗಳೂರು: ಮನರೇಗಾ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕದ ಎನ್.ಡಿ.ಎ ನಾಯಕರು ಬಹಿರಂಗ ಚರ್ಚೆಗೆ ಸಿದ್ದ ಎಂದು ಹೇಳುವುದರ ಮೂಲಕ ತಮ್ಮ ಬೌದ್ಧಿಕ ದಿವಾಳಿತನವನ್ನು ಸಾಬೀತು ಪಡಿಸಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು
ಟೀಕಿಸಿದ್ದಾರೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಜಂಟಿ ಪತ್ರಿಕಾ ಗೋಷ್ಠಿ ಮುಖಾಂತರ ಬಹಿರಂಗ ಚರ್ಚೆಗೆ ಕರೆ ನೀಡಿದ್ದಾರೆ. ಬಹಿರಂಗ ಚರ್ಚೆಗೆ ವಿಶೇಷ ವಿಧಾನ ಸಭೆಯ ಅಧಿವೇಶನ ಮೂಲಕ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರ ಈಗಾಗಲೇ ಅವರಿಗೆ ಮುಕ್ತ ಅವಕಾಶವನ್ನು ನೀಡಿದೆ. ಮನರೇಗಾ ಯೋಜನೆಗೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ವಿರೋಧಪಕ್ಷಗಳು ಚರ್ಚೆಗೆ ಮುಂದಾದಾಗ ಪಲಾಯನ ಮಾಡಿರುವ ಕೇಂದ್ರ ಸರ್ಕಾರಕ್ಕೆ ಬಹುಶಃ HD ಕುಮಾರಸ್ವಾಮಿ ಅವರ ಸಲಹೆ ಅವಶ್ಯಕತೆ ಇರುತ್ತದೆ! ಮನರೇಗಾ ಯೋಜನೆಯನ್ನು ಜನವಿರೋಧಿ ಯೋಜನೆ ಯಾಗಿ ರೂಪಿಸಿರುವ ಕೇಂದ್ರ ಸರ್ಕಾರದ ಕಾಯಿದೆಯನ್ನು ಬೆತ್ತಲೆ ಗೊಳಿಸಲು ಕರ್ನಾಟಕದಲ್ಲಿ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗುತ್ತಿದೆ. ಬಹುತೇಕ ಅಲ್ಲಿ ಬಹಿರಂಗ ಚರ್ಚೆಗೆ ಅವಕಾಶವಿದ್ದು ಎಚ್ ಡಿ ಕುಮಾರಸ್ವಾಮಿ ಅವರಿಗೆ ಲೋಕಸಭೆಯ ಬದಲು ಕರ್ನಾಟಕದ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಅಷ್ಟೊಂದು ಆಸಕ್ತಿ ಇದ್ದರೆ ರಾಷ್ಟ್ರಪತಿಗಳಿಂದ ವಿಶೇಷ ಅನುಮತಿಯನ್ನು ಪಡೆದುಕೊಂಡು ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ! ಸನ್ಮಾನ್ಯ HD ಕುಮಾರಸ್ವಾಮಿಯವರು ಕರ್ನಾಟಕದ ಬಗ್ಗೆ ಬದ್ಧತೆ ಇದ್ದರೆ ಕೆಳಕಂಡ ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮತಿಯನ್ನು ದೊರಕಿಸಿಕೊಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪರವಾಗಿ ಒತ್ತಾಯಿಸುತ್ತೇನೆ ಎಂದು ರಮೇಶ್ ಬಾಬು ಹೇಳಿದ್ದಾರೆ.
ಬಿಜೆಪಿ ನಾಯಕರ ಸವಾಲಿಗೆ ಪ್ರತಿಕ್ರಿಯಿಸಿರುವ ರಮೇಶ್ ಬಾಬು, ಕೇಂದ್ರ ಸರ್ಕಾರದ ಅನುಮೋದನೆ ಬಾಕಿಯಿರುವ ಕರ್ನಾಟಕದ ಪ್ರಮುಖ ಕೈಗಾರಿಕಾ ಯೋಜನೆಗಳ ಪಟ್ಟಿಯನ್ನು ಮುಂದಿಟ್ಟು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Second Airport) ಕರ್ನಾಟಕ ಸರ್ಕಾರವು ಬೆಂಗಳೂರು ಸುತ್ತಮುತ್ತ 3 ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಪೂರ್ವ-ಸಾಧ್ಯತಾ (Pre-feasibility) ಅಧ್ಯಯನ ನಡೆಸಿದೆ. ಕೇಂದ್ರ ಅನುಮೋದನೆ ಬಾಕಿ ಇದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BIAL) ಒಪ್ಪಂದದ ಪ್ರಕಾರ, 2033ರ ವರೆಗೆ 150 ಕಿ.ಮೀ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ BIAL ಒಪ್ಪಿಗೆ ಅಗತ್ಯ.
ಹುಬ್ಬಳ್ಳಿ – ಬೆಳಗಾವಿ – ವಿಜಯಪುರ ವಿಮಾನ ನಿಲ್ದಾಣ ವಿಸ್ತರಣೆ / ಉನ್ನತಿ. ರಾಜ್ಯ ಸರ್ಕಾರ ಸಿದ್ಧವಾಗಿದ್ದರೂ ಕೇಂದ್ರ ಸರ್ಕಾರದ ಅನುಮತಿ ಬಾಕಿ ಇದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ (MoEFCC) ಪರಿಸರ ಅನುಮತಿ ಇದ್ದರೂ ನಾಗರಿಕ ವಿಮಾನಯಾನ ಸಚಿವಾಲಯದ ಅಂತಿಮ ಒಪ್ಪಿಗೆ ಬಾಕಿ ಇದೆ.
ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳು (Defence Industrial Corridors) – ಉತ್ತರ ಕರ್ನಾಟಕ (ಹುಬ್ಬಳ್ಳಿ–ಬೆಳಗಾವಿ–ವಿಜಯಪುರ), ದಕ್ಷಿಣ ಕರ್ನಾಟಕ (ಕೋಲಾರ–ಚಿಕ್ಕಬಳ್ಳಾಪುರ–ಬೆಂಗಳೂರು ಗ್ರಾಮಾಂತರ), ಇತರೆ ರಾಜ್ಯಗಳಿಗೆ ಈಗಾಗಲೇ ಅನುಮೋದನೆ ದೊರೆತಿದ್ದರೂ, ಕರ್ನಾಟಕಕ್ಕೆ ಇನ್ನೂ ಅಧಿಕೃತ ಅನುಮೋದನೆ ನೀಡಿಲ್ಲ.
ಏರೋಸ್ಪೇಸ್ ಮತ್ತು ಡಿಫೆನ್ಸ್ ಕೈಗಾರಿಕಾ ಪಾರ್ಕ್‌ಗಳು (KIADB), ಬಹು–ಜಿಲ್ಲಾ ಕೈಗಾರಿಕಾ ಪಾರ್ಕ್ (Multi-District Industrial Park) ವಿಚಾರದಲ್ಲಿ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ವಿವರವಾದ ಯೋಜನೆ (DPR) ಬಾಕಿಯಿದೆ
ದೊಡ್ಡ ಕೈಗಾರಿಕಾ ಹೂಡಿಕೆ ಯೋಜನೆಗಳು (Green Hydrogen, Electronics, Manufacturing) ವಿಚಾರದಲ್ಲೂ ರಾಜ್ಯ ಉನ್ನತ ಮಟ್ಟದ ಸಮಿತಿ (SHLCC) ಅನುಮೋದನೆ ನೀಡಿದೆ. ಆದರೆ ಕೇಂದ್ರ ಪರಿಸರ ಅನುಮತಿ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ,ಕೇಂದ್ರ ನಿಯಂತ್ರಣ ಸಂಸ್ಥೆಗಳ ತಾಂತ್ರಿಕ ಅನುಮತಿ ಬಾಕಿ ಇದೆ.
ಬೆಂಗಳೂರು ಉಪನಗರ ರೈಲು ಯೋಜನೆ (Industrial Connectivity Project) ಗಮನಿಸಿದರೆ, ರೈಲ್ವೆ ಸಚಿವಾಲಯದ ಭೂಮಿ ಅನುಮತಿ,ರಕ್ಷಣಾ ಇಲಾಖೆಯ ಭೂಮಿ ವರ್ಗಾವಣೆ, ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ನಿಲ್ದಾಣ ಅನುಮೋದನೆ, AAI ತಾಂತ್ರಿಕ ಸಾಧ್ಯತಾ ಅಧ್ಯಯನ, BIAL ಒಪ್ಪಂದದ ಅನುಮತಿ, ಪರಿಸರ ಸಚಿವಾಲಯ (MoEFCC) ಪರಿಸರ ಅನುಮತಿ, ರಕ್ಷಣಾ ಸಚಿವಾಲಯ ಅನುಮತಿ ಇತರೆ ಬಾಕಿ ಇದೆ.
ಮೇಕೆದಾಟು ಕುಡಿಯುವ ನೀರಿನ ಯೋಜನೆ ಅನುಮೋದನೆ ಬಾಕಿ ಇದೆ. ಕೃಷ್ಣಾ ಮೆಲ್ದಂಡೆ ಮೂರನೇ ಹಂತದ ಯೋಜನೆ ಅನುಮತಿ ಬಾಕಿ ಇದೆ. ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಅನುಮತಿ ಬಾಕಿ ಇದೆ ಎಂದು ರಮೇಶ್ ಬಾಬು ಬೊಟ್ಟು ಮಾಡಿದ್ದಾರೆ.
ರಾಜ್ಯ ಸರ್ಕಾರ ಅನುಮೋದನೆ ನೀಡಿದ ಹಲವು ಪ್ರಮುಖ ಕೈಗಾರಿಕಾ ಮತ್ತು ಮೂಲಸೌಕರ್ಯ ಯೋಜನೆಗಳು, ಕೇಂದ್ರದ ಅನುಮತಿ ವಿಳಂಬದಿಂದ ಸ್ಥಗಿತಗೊಂಡಿವೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣ, ಡಿಫೆನ್ಸ್ ಕಾರಿಡಾರ್ ಮತ್ತು ದೊಡ್ಡ ಕೈಗಾರಿಕಾ ಪಾರ್ಕ್‌ಗಳು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ನಿರ್ಣಾಯಕ ಎಂದಿರುವ ಅವರು, ಕೇಂದ್ರದ ಎನ್‌ಡಿಎ ಸರ್ಕಾರದ ಅಸಹಕಾರದಿಂದ ಕರ್ನಾಟಕದ ಕೈಗಾರಿಕಾ ವೇಗಕ್ಕೆ ಅಡ್ಡಿಯಾಗುತ್ತಿದೆ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಕೇಂದ್ರದ ಬಿಜೆಪಿಯನ್ನು ಮೆಚ್ಚಿಸಲು ಅಥವಾ ಕೇಂದ್ರದ ನಾಯಕರನ್ನು ಮೆಚ್ಚಿಸಲು ಹೇಳಿಕೆ ನೀಡುವ ಬದಲು ಹೆಚ್‍ಡಿ ಕುಮಾರಸ್ವಾಮಿ ಮತ್ತು ಕೇಂದ್ರ ಬಿಜೆಪಿ ಸಚಿವರು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರಕ್ಕೆ ಪಾಠ ಹೇಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಪ್ರಾಮಾಣಿಕ ಪ್ರಯತ್ನ ಮಾಡಲಿ. ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಲಿ, ತಮ್ಮ ಧ್ವನಿಯನ್ನು ರಾಜ್ಯದ ಪರವಾಗಿ ಗಟ್ಟಿಗೊಳಿಸಲಿ ಎಂದು ರಮೇಶ್ ಬಾಬು ಅವರು ಬಿಜೆಪಿ ನಾಯಕರನ್ನು ಒತ್ತಾಯಿಸಿದ್ದಾರೆ.



















































