ಬೆಂಗಳೂರು: ವಾಲ್ಮೀಕಿ ನಿಗಮದ ಶಾಖಾಧಿಕಾರಿ ಪ್ರಕಾಶ್ ಗೆ ಹಣವನ್ನು ಪತ್ನಿಯ ಹೆಸರಿಗೆ ವರ್ಗಾವಣೆ ಮಾಡಲು ನಿರ್ದೇಶಿಸಿದ್ದು ಯಾರು ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಪರಿಶಿಷ್ಟ ವರ್ಗದವರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ 80 ಲಕ್ಷ ರೂ ಮೊತ್ತದ ವಾಲ್ಮೀಕಿ ನಿಗಮದ ಹಣವನ್ನು ಮಾಜಿ ಸಚಿವರ ಪತ್ನಿಯ ಖಾತೆಗೆ ವರ್ಗಾಯಿಸಿದ್ದೆ ಎಂದು ಅಲ್ಲಿ ನೌಕರಿ ಮಾಡುತ್ತಿದ್ದ ಸೆಕ್ಷನ್ ಆಫೀಸರ್ ಪ್ರಕಾಶ್ ಎಂಬಾತ ವಿಚಾರಣೆ ವೇಳೆ ಸಿ.ಬಿ.ಐ. ಗೆ ಹೇಳಿದ್ದಾನೆ. ಕಾಂಗ್ರೆಸ್ ಆಡಳಿತದಲ್ಲಿ ಅತಿ ದೊಡ್ಡ ಹಗರಣವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ ಸಿ.ಬಿ.ಐ ಗೆ ತನಿಖೆ ಒಪ್ಪಿಸದಿರಲು ಕಾರಣವೇನು ಎಂಬುದು ಈ ಖಾತರಿಗೊಂಡಿದೆ ಎಂದು ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ಪರಿಶಿಷ್ಟ ವರ್ಗದವರ ಶ್ರೇಯೋಭಿವೃದ್ಧಿಗೆ, ಕಲ್ಯಾಣಕ್ಕೆ, ಅವರಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲು ಇರುವ ನಿಧಿಯನ್ನು ಐಷಾರಾಮಿ ಕಾರು, ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡುವ ಮೂಲಕ ರಾಜ್ಯದ ಜನತೆಗೆ ಹಾಗೂ ಪರಿಶಿಷ್ಟ ವರ್ಗದವರಿಗೆ ಕಾಂಗ್ರೆಸ್ ಅನ್ಯಾಯವೆಸಗಿದೆ ಎಂದವರು ತಮ್ಮ X ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಎಲ್ಲ ಆಯಾಮದಲ್ಲೂ ತನಿಖೆ ಮಾಡುತ್ತಿರುವ ಕೇಂದ್ರೀಯ ತನಿಖಾ ದಳ ಈ ಹಗರಣದಲ್ಲಿ ಭಾಗಿ ಆಗಿರುವ ಎಲ್ಲರನ್ನೂ ಜೈಲಿಗೆ ಕಳುಹಿಸುವ ವಿಶ್ವಾಸವಿದೆ ಎಂದಿದ್ದಾರೆ. .



















































