ಬೆಂಗಳೂರು: ಬೆಂಗಳೂರಿನ ಬಿ-ಖಾತಾದಾರರಿಗೆ ರಾಜ್ಯ ಸರ್ಕಾರ ಮಹತ್ವದ ಸಡಿಲಿಕೆ ನೀಡಲು ಮುಂದಾಗಿದ್ದು, ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳು ಮತ್ತು ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಪಡೆಯುವ ಅವಕಾಶ ಲಭ್ಯವಾಗಲಿದೆ. ಒತ್ತುವರಿ ಮತ್ತು ಕಟ್ಟಡ ಉಲ್ಲಂಘನೆಯ ಪ್ರಮಾಣಕ್ಕೆ ಅನುಗುಣವಾಗಿ ದಂಡದ ಮೊತ್ತವನ್ನು ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ನಗರದ ಬಡಾವಣೆಗಳಲ್ಲಿನ ಬಿ-ಖಾತಾ ನಿವೇಶನಗಳು, ಕಟ್ಟಡಗಳು ಹಾಗೂ ನಗರ ಪಾಲಿಕೆಗಳ ವ್ಯಾಪ್ತಿಯ ಅಧಿಕೃತ ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳಿಗೆ ಎ-ಖಾತಾ ಸೌಲಭ್ಯ ನೀಡಲು ಸರ್ಕಾರ ಒಲವು ತೋರಿದೆ ಎನ್ನಲಾಗಿದೆ. 1961ರ ಕಾಯ್ದೆಯನ್ನು ಉಲ್ಲಂಘಿಸಿ ನಿರ್ಮಿಸಿರುವ ಅಧಿಕೃತ ನಿವೇಶನಗಳು, ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಫ್ಲಾಟ್‌ಗಳಿಗೆ ಮಾತ್ರ ಖಾತಾ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಪ್ರಸ್ತುತ ನಗರದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಬಿ-ಖಾತಾ ಆಸ್ತಿಗಳಿದ್ದು, ಜಿಬಿಎ (GBA) ವ್ಯಾಪ್ತಿಯಲ್ಲಿ ಈಗಾಗಲೇ ಜಾರಿಯಲ್ಲಿರುವ ನಿಯಮಗಳನ್ನೇ ಇತರೆ ಪ್ರದೇಶಗಳಿಗೂ ಅನ್ವಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಒತ್ತುವರಿ ಮತ್ತು ಕಟ್ಟಡ ಉಲ್ಲಂಘನೆಯ ಪ್ರಮಾಣಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುತ್ತಿದ್ದು, ಈ ಎ-ಖಾತಾ ಪರಿವರ್ತನಾ ಪ್ರಕ್ರಿಯೆ ಸರ್ಕಾರದ ಆದಾಯ ವೃದ್ಧಿಯ ಉದ್ದೇಶದಿಂದಲೇ ನಡೆಯುತ್ತಿದೆ ಎಂಬ ಚರ್ಚೆಯೂ ಕೇಳಿಬರುತ್ತಿದೆ.
ಎ-ಖಾತಾ ಪರಿವರ್ತನೆಗಾಗಿ ಆನ್‌ಲೈನ್ ಮೂಲಕ ಇ-ಖಾತಾಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಪಾರ್ಟ್‌ಮೆಂಟ್‌ಗಳು ಈ ವರ್ಷದ ಆಸ್ತಿ ತೆರಿಗೆ ಪಾವತಿಸಿರಬೇಕು. ಜೊತೆಗೆ ಕಟ್ಟಡ ನಕ್ಷೆ ಕಡ್ಡಾಯವಾಗಿದ್ದು, ನಕ್ಷೆ ಮೀರಿ ನಿರ್ಮಾಣಗೊಂಡಿದ್ದಲ್ಲಿ ಮಾರ್ಗಸೂಚಿ ಮೌಲ್ಯದ ಶೇಕಡಾ 50ರಷ್ಟು ದಂಡ ಪಾವತಿಸಬೇಕಾಗುತ್ತದೆ. ಇದಲ್ಲದೆ, ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ದರದ ಶೇಕಡಾ 5ರಷ್ಟು ಶುಲ್ಕ ಪಾವತಿ ಕಡ್ಡಾಯವಾಗಿದೆ.
ಅಪಾರ್ಟ್‌ಮೆಂಟ್ ನಿರ್ಮಿತವಾಗಿರುವ ಭೂಮಿಗೆ ಬಿ-ಖಾತಾ ಇರಬೇಕು. ಫ್ಲಾಟ್ ಮಾಲೀಕರು ವೈಯಕ್ತಿಕವಾಗಿ ಇ-ಖಾತಾಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಸಲ್ಲಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ ಬಳಿಕ ಎ-ಖಾತಾ ವಿತರಿಸಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.



















































