ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಸಮೀಪದ ಬೋರಿಮಾರ್ ಗ್ರಾಮದಲ್ಲಿರುವ, 133 ವರ್ಷಗಳ ಶ್ರೀಮಂತ ಇತಿಹಾಸ ಹೊಂದಿದ ಸಂತ ಜೋಸೆಫರಿಗೆ ಸಮರ್ಪಿತ ಬೋರಿಮಾರ್ ಚರ್ಚ್‌ನ ನೂತನ ಚರ್ಚ್ ಪಾಲನ ಸಮಿತಿಯ ಚುನಾವಣೆ ಯಶಸ್ವಿಯಾಗಿ ನಡೆದಿದೆ.
ಈ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಬೋರಿಮಾರ್ ಗ್ರಾಮದ ಮ್ಯಾಕ್ಸಿಮ್ ಸಿಕ್ವೇರಾ ಅವರು ಉಪಾಧ್ಯಕ್ಷರಾಗಿ, ಮಾಣಿ ಗ್ರಾಮದ ಮೆಲ್ವಿನ್ ಮಾರ್ಟಿಸ್ ಅವರು ಕಾರ್ಯದರ್ಶಿಯಾಗಿ, ಕೆದಿಲ ಗ್ರಾಮದ ದಿವ್ಯಾ ಡಿಸೋಜ ಅವರು ಸಮಿತಿ ಸಂಚಾಲಕರಾಗಿ ಹಾಗೂ ಬಾಳ್ತಿಲ ಗ್ರಾಮದ ಜ್ಯಾನೆಟ್ ಲಸ್ರಾದೊ ಅವರು ವಲಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಸಮಿತಿಯ ಪದಗ್ರಹಣ ಇತ್ತೀಚೆಗೆ ನೆರವೇರಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಅನುಮೋದನೆಯೊಂದಿಗೆ, ಹೊಸ ವರ್ಷದ ಹೊಸ್ತಿಲಿನಲ್ಲಿ ದಿವ್ಯ ಬಲಿಪೂಜೆ ಹಾಗೂ ಆರಾಧನೆಯೊಂದಿಗೆ ನೂತನ ಚರ್ಚ್ ಪಾಲನ ಸಮಿತಿಯ ಪದಗ್ರಹಣ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಧರ್ಮಕೇಂದ್ರದ ಧರ್ಮಗುರು ಸ್ವಾಮಿ ಪ್ಯಾಟ್ರಿಕ್ ಸಿಕ್ವೇರಾ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ಅವ್ಯಾಹತ ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಬೇಸತ್ತಿದ್ದ ಧರ್ಮಕೇಂದ್ರದ ಜನತೆ, ಈ ಬಾರಿ ಪ್ರತಿಯೊಂದು ಗ್ರಾಮದಲ್ಲೂ ಹೊಸ ಗುರಿಕಾರರು ಹಾಗೂ ಹೊಸ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದರು. ಇದರ ಪರಿಣಾಮವಾಗಿ ಹಿರಿಯರು, ಮಧ್ಯಮ ವಯಸ್ಕರು ಹಾಗೂ ಯುವಜನರನ್ನು ಒಳಗೊಂಡ ಸಮತೋಲನದ ಹೊಸ ಪಾಲನ ಸಮಿತಿ ಆಯ್ಕೆಯಾಗಿದ್ದು, ಧರ್ಮಕೇಂದ್ರದ ಜನತೆಯಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಈ ನೂತನ ಸಮಿತಿಯ ರಚನೆ ಮಂಗಳೂರು ಧರ್ಮಪ್ರಾಂತ್ಯದ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರಲ್ಲಿ ಸಹ ಸಂತೋಷ ಮತ್ತು ತೃಪ್ತಿಯನ್ನುಂಟುಮಾಡಿದೆ.

























































