ಬೆಳಗಾವಿ: ವಾರಾಹಿ ಯೋಜನೆಯಡಿ ಎಲ್ಲಾ ಬಾಕಿ ಕಾಮಗಾರಿಗಳನ್ನು ತಾಂತ್ರಿಕ ಸಾಧ್ಯತೆಗೆ ಅನುಗುಣವಾಗಿ ಮತ್ತು ಯೋಜನೆಗೆ ಅವಶ್ಯವಿರುವ ಅರಣ್ಯ ಭೂಮಿ ಪ್ರಸ್ತಾವನೆಗಳಿಗೆ ತೀರುವಳಿ ಪಡೆದು, ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಉತ್ತರಿಸಿದರು. ವಾರಾಹಿ ಯೋಜನೆಯಡಿ ಮೂಲ ಯೋಜನೆಯ ಅಚ್ಚುಕಟ್ಟು ವಿಸ್ತ್ರೀರ್ಣದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಯೋಜನೆಯನ್ನು ಮಾರ್ಪಡಿಸಲಾಗಿದ್ದು, ₹569.53 ಕೋಟಿ ಅಂದಾಜು ಮೊತ್ತದ ಯೋಜನಾ ವರದಿಗೆ 20.03.2006ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಈ ಯೋಜನೆಯು ಪಶ್ಚಿಮ ಘಟ್ಟದ ಕೆಳಭಾಗ ಮತ್ತು ಕರಾವಳಿ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರಪ್ರಥಮ ಬೃಹತ್ ನೀರಾವರಿ ಯೋಜನೆಯಾಗಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಹಲವಾರು ತಾಂತ್ರಿಕ ಅಡಚಣೆಗಳು ಎದುರಾಗಿರುತ್ತವೆ. ಪ್ರಸ್ತಾಪಿತ ಯೋಜನೆಯ ಯೋಜಿತ ರೂಪುರೇಷೆಗೆ ಅನುಗುಣವಾಗಿ ಮತ್ತು ನಿಗದಿತ ನೀರಾವರಿ ಸಾಮರ್ಥ್ಯ ಕಲ್ಪಿಸುವಿಕೆಗೆ ಪೂರಕವಾಗಿ ಕಾಲಕಾಲಕ್ಕೆ, ತಾಂತ್ರಿಕ ಪರಿಣಿತರ ಸಲಹೆ / ಅಭಿಪ್ರಾಯ ಪಡೆದು, ಸ್ಥಳೀಯ, ತಾಂತ್ರಿಕ ಅವಶ್ಯಕತೆಗನುಗುಣವಾಗಿ ಸಕ್ಷಮ ಪ್ರಾಧಿಕಾರಗಳ ಅನುಮೋದನೆಯೊಂದಿಗೆ ವಿನ್ಯಾಸದಲ್ಲಿ ಬದಲಾವಣೆ ಮಾಡಿ ನಿರ್ವಹಿಸಲಾಗಿದೆ. ಎಂದು ತಿಳಿಸಿದರು.
ದರಪಟ್ಟಿಯ ಪರಿಷ್ಕರಣೆ, ಹೊಸ ಭೂಸ್ವಾಧೀನ ಕಾಯ್ದೆಯನ್ನು ಭೂಪರಿಹಾರದಲ್ಲಿನ ಹೆಚ್ಚಳ, ಇತ್ಯಾದಿ ಕಾರಣಗಳಿಂದಾಗಿ ಯೋಜನಾ ವೆಚ್ಚದಲ್ಲಿ ಹೆಚ್ಚುವರಿಯಾಗಿರುತ್ತದೆ. ನಿಗಮದ ವರದಿಯಂತೆ, 2023-24ನೇ ಸಾಲಿನ ದರಪಟ್ಟಿಯನ್ವಯ ₹3519.21 ಕೋಟಿ ಅಂದಾಜು ಮೊತ್ತದ ಪರಿಷ್ಕೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದ್ದು, ನಿಗಮ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದವರು ತಿಳಿಸಿದರು.
ಪ್ರಸ್ತುತ, ಸದರಿ ಯೋಜನೆಯಡಿ ವಾರಾಹಿ ಡೈವರ್ಶನ್ ವಿಯರ್, ವಾರಾಹಿ ಬಲದಂಡೆ ಸಾಮಾನ್ಯ ಕಾಲುವೆ 0.00 ರಿಂದ 18.725 ಕಿ.ಮೀ. ಎಡದಂಡೆ ಕಾಲುವೆ 0.00 ರಿಂದ 43.694 ಕಿ.ಮೀ. ಕಾಮಗಾರಿಗಳು ಪೂರ್ಣಗೊಂಡಿದ್ದು, 6,155 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿರುತ್ತದೆ ಎಂದರು.
ಯೋಜಿತ ಅಚ್ಚುಕಟ್ಟು 15,702 ಹೆಕ್ಟೇರ್ ಪ್ರದೇಶಕ್ಕೆ ಹೋಲಿಸಿದಾಗ ಸುಮಾರು ಶೇ. 40 ರಷ್ಟು ನೀರಾವರಿ ಸಾಮರ್ಥ್ಯವನ್ನು ಸೃಜಿಸಲಾಗಿರುತ್ತದೆ. ವಾರಾಹಿ ಎಡದಂಡೆ ನಾಲಾ ವಿತರಣಾ ನಾಲಾ ಕಾಮಗಾರಿ ಹಾಗೂ ವಾರಾಹಿ ಏತ ನೀರಾವರಿ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. ಬಲದಂಡ ಕಾಲುವೆ ಚೈ.18.725 ಕಿ.ಮೀ. ನಂತರದ ಕಾಮಗಾರಿಯನ್ನು ಇದೂವರೆಗೆ ಪ್ರಾರಂಭಿಸಿರುವುದಿಲ್ಲ ಎಂದ ಅವರು, ವಾರಾಹಿ ಬಲದಂಡೆ ಕಾಲುವೆಯ ಮೂಲ ಸರಪಳಿ 18.419 ಕಿ.ಮೀ. ರಿಂದ 42.73 ಕಿ.ಮೀ. ವರೆಗಿನ ನಾಲಾ ಪಂಕ್ತಿಕರಣವು ಆಳ ಅಗೆತವನ್ನು ಹೊಂದಿದ್ದು, ರಕ್ಷಿತ ಅರಣ್ಯ ಮತ್ತು ಡೀಮ್ ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಸದರಿ ನಾಲೆಯಡಿ 1800 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿರುತ್ತದೆ ಎಂದರು.
ಅರಣ್ಯ ಭೂಮಿ ಬಿಡುಗಡೆ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ ಬಲದಂಡೆ ನಾಲಾ ಪಥವನ್ನು ಬದಲಾಯಿಸಿ, ಪರಿಷ್ಕೃತ ಅಂದಾಜು ಪಟ್ಟಿಯನ್ನು ಚಾಲ್ತಿಯಲ್ಲಿರುವ 2023-24ನೇ ಸಾಲಿನ ಏಕರೂಪ ದರಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತೆ ಕುರಿತು ಕರ್ನಾಟಕ ನೀರಾವರಿ ನಿಗಮದಲ್ಲಿ ಪರಿಶೀಲಿಸಲಾಗುತ್ತಿದೆ ಎಂದವರು ವಿವರಿಸಿದರು.

















































